ಹುಬ್ಬಳ್ಳಿ:ಬಹುದಿನಗಳ ಬೇಡಿಕೆಯಾಗಿದ್ದ ರಾಷ್ಟ್ರೀಯ ವಿಧಿ ವಿಜ್ಞಾನ ಶಾಸ್ತ್ರದ ವಿಶ್ವವಿದ್ಯಾಲಯ ಕ್ಯಾಂಪಸ್ (ನ್ಯಾಷನಲ್ ಫಾರೆನ್ಸಿಕ್ ಸೈನ್ಸ್ ಯೂನಿವರ್ಸಿಟಿ-ಎನ್ಎಫ್ಎಸ್ಯು) ಹುಬ್ಬಳ್ಳಿ- ಧಾರವಾಡದಲ್ಲಿ ಸ್ಥಾಪಿಸಲು ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ. ಈ ನಿಟ್ಟಿನಲ್ಲಿ ಜನವರಿ 27ರಂದು ಅಡಿಗಲ್ಲು ಸಮಾರಂಭ ನಡೆಯುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರದ ಗೃಹ ಇಲಾಖೆಯ ಮಂಜೂರಾತಿ ಪ್ರತಿ ರಾಜ್ಯ ಸರ್ಕಾರಕ್ಕೆ ಬಂದಿದೆ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್:ಕಳೆದ 2-3 ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರಿಗೆ ಈ ಕುರಿತು ವಿವರವಾಗಿ ಪತ್ರ ಬರೆಯಲಾಗಿತ್ತು. ಈ ಭಾಗದಲ್ಲಿ ವಿಶ್ವವಿದ್ಯಾಲಯ ಕ್ಯಾಂಪಸ್ ಸ್ಥಾಪನೆಯ ಅಗತ್ಯತೆ ಕುರಿತು ಮನವರಿಕೆ ಮಾಡಿದ ಹಾಗೂ ನಂತರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದ ಪರಿಣಾಮವಾಗಿ ಅವಳಿ ನಗರಕ್ಕೆ ಇಂತಹ ಉನ್ನತ ಶೈಕ್ಷಣಿಕ ಸಂಸ್ಥೆ ದೊರೆತಿದೆ. ಇದು ಹೆಮ್ಮೆಯ ವಿಷಯ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮ ಬಾರಿಗೆ ಕರ್ನಾಟಕದ ಅದರಲ್ಲೂ ಹುಬ್ಬಳ್ಳಿ - ಧಾರವಾಡ ಮಹಾನಗರದಲ್ಲಿ ವಿಧಿ ವಿಜ್ಞಾನ ಶಾಸ್ತ್ರ ವಿಶ್ವವಿದ್ಯಾಲಯ ಸ್ಥಾಪಿಸಲು ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿರುವುದು ಸಂತಸದ ಸಂಗತಿ ಎಂದು ತಿಳಿಸಿದ್ದಾರೆ.
ಈ ವಿಶ್ವವಿದ್ಯಾಲಯ ಸ್ಥಾಪನೆಯಿಂದ ಅಪರಾಧಗಳ ತನಿಖಾ ಮಟ್ಟದ ತಾಂತ್ರಿಕ ಸೌಲಭ್ಯಗಳು ದೊರೆಯಲಿದೆ. ಕರ್ನಾಟಕ ಸೇರಿದಂತೆ ಸುತ್ತಲಿನ ರಾಜ್ಯಗಳಲ್ಲಿ ತನಿಖೆಗೆ ವೇಗ ಸಿಗಲಿದೆ. ಅಪರಾಧ ಶಾಸ್ತ್ರ ಹಾಗೂ ಮಾನವ ಶಾಸ್ತ್ರ, ಲೈಫ್ ಸೈನ್ಸ್, ಜಿನೆಟಿಕ್ಸ್, ಬಯೋಟೆಕ್ನಾಲಜಿ, ಪ್ರಾಣಿಶಾಸ್ತ್ರ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಹಾಗೂ ಸಂಶೋಧನೆಗೆ ಬಹಳಷ್ಟು ಅನುಕೂಲವಾಗಲಿದೆ.
ಇದನ್ನೂ ಓದಿ:ಶಿವಮೊಗ್ಗದಲ್ಲೂ ವಿಧಿ ವಿಜ್ಞಾನ ಕೇಂದ್ರ ತೆರೆಯಲಾಗುವುದು: ಗೃಹ ಸಚಿವ ಆರಗ ಜ್ಞಾನೇಂದ್ರ