ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕೇಂದ್ರ ಸರ್ಕಾರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ್ ಅಭಿಯಾನ(ಅಮೃತ) ಯೋಜನೆಯಡಿಯಲ್ಲಿ ₹156 ಕೋಟಿ ಅನುದಾನ ನೀಡಿದೆ. ಒಳಚರಂಡಿ ಹಾಗೂ ಮಲಿನ ನೀರು ಸಂಸ್ಕರಣಾ ಘಟಕಗಳನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ಅಮೃತ ಯೋಜನೆ ಅಡಿ ಸಿದ್ಧಗೊಳ್ಳುತ್ತಿರುವ ಕಾಮಗಾರಿಗಳು ನಗರದ ರೈಲ್ವೆ ಕ್ವಾಟ್ರಸ್ ಮತ್ತು ನವೀನ್ ಪಾರ್ಕ್ನ ವೆಟ್‌ವೆಲ್ಲ್ (ಮಲಿನ ನೀರಿನ ಸಂಗ್ರಹ ಹಾಗೂ ಮೇಲೆತ್ತುವ ಘಟಕ) ಹಾಗೂ ಉಣಕಲ್‌ನ ಬೈರೀದೇವರಕೊಪ್ಪದ ಮಲಿನದ ನೀರು ಶುದ್ಧೀಕರಣ ಘಟಕಗಳ ಕಾಮಗಾರಿ ಪ್ರಗತಿ ವೀಕ್ಷಿಸಿದರು.
₹156 ಕೋಟಿ ವೆಚ್ಚದಲ್ಲಿ 202 ಕಿ.ಮೀ. ಒಳಚರಂಡಿ ಕೊಳವೆ ಮಾರ್ಗ, 5 ಮಲಿನ ನೀರು ಶುದ್ಧಿಕರಣ ಘಟಕಗಳು ಹಾಗೂ 3 ವೆಟ್‌ವೆಲ್‌ಗಳನ್ನು ಅವಳಿನಗರದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಧಾರವಾಡವಾಡದ ಕೃಷಿ ವಿ.ವಿ.ಯಲ್ಲಿ 10, ಕೆಲಗೇರಿಯಲ್ಲಿ 3, ಹುಬ್ಬಳ್ಳಿಯ ಉಣಕಲ್ ಕೆರೆಯ ಬಳಿ 3, ತೋಳನಕರೆ ಬಳಿ 1 ಹಾಗೂ ರಾಮನಗರದಲ್ಲಿ 0.25 ಎಂ.ಎಲ್.ಡಿ ಸಾಮಾಥ್ಯದ ತ್ಯಾಜ್ಯ ನೀರು ಶುದ್ಧೀಕರಣ ಘಟಕಗಳ ಕಾಮಗಾರಿಗಳು ಅರ್ಧಕ್ಕಿಂತ ಹೆಚ್ಚು ಪೂರ್ಣಗೊಂಡಿವೆ.
ಯೋಜನೆಯ ನಿಯಮಾವಳಿಗಳ ಪ್ರಕಾರ ಗುತ್ತಿಗೆದಾರರು 5 ವರ್ಷಗಳ ಕಾಲ ಎಲ್ಲಾ ಘಟಕಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳವರು ಎಂದರು.