ಸುದ್ದಿಗಾರೊಂದಿಗೆ ಮಾತನಾಡಿದ ಶಾಸಕ ಅರವಿಂದ ಬೆಲ್ಲದ್ ಹುಬ್ಬಳ್ಳಿ:ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಆದರೆ ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯಲ್ಲಿಯೇ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 5 ಕೆಜಿ ಅಕ್ಕಿ ಕೊಡುವ ಬದಲಿಗೆ ಅರ್ಹ ಪಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವ ಕಾರ್ಯ ಮಾಡಬೇಕು ಆಗ ಜನರಿಗೆ ಯಾರು ಎಷ್ಟು ಅಕ್ಕಿ ಕೊಡುತ್ತಾರೆ ಅನ್ನೋದು ಗೊತ್ತಾಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ್ ಹೇಳಿದರು.
ನಗರದಲ್ಲಿಂದು ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಒಬ್ಬರಿಗೆ ತಿಂಗಳಿಗೆ 10 ಕೆಜಿ ಅಕ್ಕಿ ಹೆಚ್ಚಾಗುತ್ತದೆ. ಜನರು ಕೇವಲ ಅಕ್ಕಿಯನ್ನು ಮಾತ್ರ ತಿನ್ನುವುದಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡುವ 5 ಕೆಜಿ ಅಕ್ಕಿಯ ಬದಲಾಗಿ ಪಲಾನುಭವಿಗಳ ಖಾತೆಗೆ ಹಣವನ್ನು ಜಮಾ ಮಾಡಿದರೇ ಅವರು ದೈನಂದಿನ ಜೀವನಕ್ಕೆ ಬೇಕಾದ ಜೋಳ, ರಾಗಿಗಳಂತ ಧಾನ್ಯ ಖರೀದಿಸುತ್ತಾರೆ. ಆಗ ಜನರಿಗೆ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಅರಿವಾಗುತ್ತದೆ ಎಂದು ಹೇಳಿದರು.
ಇನ್ನು ಈ ಬಗ್ಗೆ ನಾನು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತೇನೆ. ಕಾಂಗ್ರೆಸ್ ಸರ್ಕಾರದ ಬಣ್ಣವನ್ನು ಬಯಲು ಮಾಡುವ ದೃಷ್ಟಿಯಿಂದ ಹಾಗೂ ಜನರ ಹಿತದೃಷ್ಟಿಯಿಂದ ಇಂತಹದೊಂದು ನಿರ್ಧಾರಕ್ಕೆ ಬರಬೇಕು ಎಂದು ಶಾಸಕ ಬೆಲ್ಲದ್ ಮನವಿ ಮಾಡಿದರು.
ವಿರೋಧ ಪಕ್ಷದ ನಾಯಕನ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ:ವಿಪಕ್ಷ ನಾಯಕನ ಆಯ್ಕೆಯಲ್ಕಿ ಅರವಿಂದ್ ಬೆಲ್ಲದ್ ಅವರ ಹೆಸರು ಮುನ್ನೆಲೆಗೆ ಬಂದಿರುವ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಅವರು, ಈ ಬಗ್ಗೆ ಪಕ್ಷ ಹಾಗೂ ಹಿರಿಯ ನಾಯಕರು ನಿರ್ಧಾರ ಮಾಡುತ್ತಾರೆ. ವಿರೋಧ ಪಕ್ಷದ ನಾಯಕರ ಆಯ್ಕೆ ಪಕ್ಷಕ್ಕೆ ಹಾಗೂ ಪಕ್ಷದ ನಾಯಕರಿಗೆ ಬಿಟ್ಟಿದ್ದು, ಅವರು ಏನೇ ಜವಾಬ್ದಾರಿ ನೀಡಿದರೂ ನಾನು ನಿಭಾಯಿಸಲು ಸಿದ್ಧ. ಶಾಸಕನಾಗಿ ಕೆಲಸ ಮಾಡುವಂತೆ ಪಕ್ಷ ಟಿಕೆಟ್ ನೀಡಿದೆ. ಅದರಂತೆ ಜನರು ಕೂಡ ಆಶೀರ್ವಾದ ಮಾಡಿದ್ದಾರೆ. ಮುಂದೆ ಪಕ್ಷ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿ ಕೆಲಸ ಮಾಡಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ:ಬೆಲೆ ಏರಿಕೆಯಿಂದ ತತ್ತರಿಸುತ್ತಿರುವ ಜನರ ಆರ್ಥಿಕ ಹೊರೆ ತಗ್ಗಿಸಲು ಗ್ಯಾರಂಟಿ ಯೋಜನೆ : ಡಿ ಕೆ ಶಿವಕುಮಾರ್
ಹೆಚ್ಡಿ ಕುಮಾರಸ್ವಾಮಿ ಟೀಕೆ:ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, "ಷರತ್ತು ಸಹಿತವಾಗಿ ಘೋಷಣೆ ಮಾಡಲಾಗಿರುವ 5 ಗ್ಯಾರಂಟಿಗಳ ಬಗ್ಗೆ ಈಗಾಗಲೇ ಜನರಿಗೆ ಒಂದು ನಿರ್ದಿಷ್ಟ ಅಭಿಪ್ರಾಯ ಬಂದಿದೆ. ಹರುಷದ ಕೂಳಿಗೆ ಆಸೆಪಟ್ಟು ವರುಷದ ಕೂಳು ಕಳೆದುಕೊಂಡರು ಎನ್ನುವ ಮಾತನ್ನು ಹೇಳಲಾರೆ. ಆದರೆ, ರಾಜ್ಯದ ಜನತೆಗೆ ಇದರ ಒಳಮರ್ಮ ಅರ್ಥವಾಗಲು ಬಹಳ ದಿನ ಬೇಕಿಲ್ಲ" ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ತಾಂತ್ರಿಕ ಸ್ಪರ್ಶ: ಕ್ಷಣಾರ್ಧದಲ್ಲಿಯೇ ಆರೋಗ್ಯ ತಪಾಸಣೆ ವರದಿ ಆನ್ಲೈನ್ನಲ್ಲಿ ಲಭ್ಯ..