ಧಾರವಾಡ :ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹೈವೋಲ್ಟೇಜ್ ಕ್ಷೇತ್ರ ಎಂದೇ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರ ಗುರುತಿಸಿಕೊಂಡಿದೆ. ಇದೀಗ ನಿನ್ನೆ ನಡೆದ ಈ ಕ್ಷೇತ್ರದ ಮತಯಂತ್ರಗಳು ತಡವಾಗಿ ಸ್ಟ್ರಾಂಗ್ ರೂಮ್ ಸೇರಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ ಹೆಗಡೆ ಮಾಹಿತಿ ನೀಡಿದರು. ಈ ಕುರಿತು ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹು-ಧಾ ಸೆಂಟ್ರಲ್ ಕ್ಷೇತ್ರದ ಮತಯಂತ್ರಗಳು ಇಂದು ಬೆಳಗ್ಗೆ ಸ್ಟ್ರಾಂಗ್ ರೂಮ್ ಸೇರಿವೆ. ಬೆಳಗಿನ ಬಳಿಕ ಜಿಲ್ಲಾಡಳಿತ ಸ್ಟ್ರಾಂಗ್ ರೂಮ್ ಸೀಲ್ ಮಾಡಿದೆ ಎಂದು ಮಾಹಿತಿ ನೀಡಿದರು.
ಧಾರವಾಡ ಕೃಷಿ ವಿವಿಯಲ್ಲಿ ಸ್ಟ್ರಾಂಗ್ ರೂಮ್ ಸ್ಥಾಪಿಸಲಾಗಿದ್ದು, ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ನಿನ್ನೆ ಸಂಜೆ ಬಳಿಕವೂ ಮತದಾನ ನಡೆದಿದೆ. ಇದರಿಂದ ಡಿ ಮಸ್ಟರಿಂಗ್ ತಡವಾಗಿ ಆಗಿದ್ದು, ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಸ್ಕೂಲ್ಗೆ ನಿನ್ನೆ (ಬುಧವಾರ) ರಾತ್ರಿ ತಡವಾಗಿ ಡಿ ಮಸ್ಟರಿಂಗ್‌ಗೆ ಇವಿಎಂ ಬಂದಿದ್ದವು. ಹೀಗಾಗಿ ಮತಯಂತ್ರಗಳು ತಡವಾಗಿ ಎಣಿಕೆ ಕೇಂದ್ರಕ್ಕೆ ಬಂದಿವೆ. ಮತಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿಟ್ಟು ಸೀಲ್ ಮಾಡಲಾಗಿದೆ. ಉಳಿದ ಆರು ಕ್ಷೇತ್ರಗಳ ಸ್ಟ್ರಾಂಗ್ ರೂಮ್ ನಿನ್ನೆಯೇ ಸೀಲ್ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.
ನವಲಗುಂದ ಹಾಗೂ ಹು-ಧಾ ಕೇಂದ್ರದಲ್ಲಿ ಸಂಜೆ ವೇಳೆಗೆ ಮತದಾರರ ಆಗಮನ ಹೆಚ್ಚಾಗಿತ್ತು. ಹೀಗಾಗಿ ಮತದಾನ ಪ್ರಕ್ರಿಯೆ ತಡವಾಗಿದೆ. ಮೈನರ್ ಸಮಸ್ಯೆಗಳಾಗಿವೆ. ಆದರೆ ಮೇಜರ್ ಸಮಸ್ಯೆಗಳು ಆಗಿಲ್ಲ ಯಾವುದೇ 1000 ಕ್ಕಿಂತ ಹೆಚ್ಚಿನ ಮತದಾರರಿರುವ ಬೂತ್ ಗಳಲ್ಲಿ ತಡವಾಗಿದೆ. ಆದರೂ ಎಲ್ಲರಿಗೂ ಮತ ಹಾಕಲು ಅವಕಾಶ ನೀಡಿದ್ದೇವೆ. ಕಳೆದ ಆರು ತಿಂಗಳಲ್ಲಿ ಯಾವ ಮತದಾರರ ಪಟ್ಟಿಯೂ ಕ್ಯಾನ್ಸಲ್ ಆಗಿಲ್ಲ. ಮತದಾರ ಪಟ್ಟಿಯನ್ನು ಚೆಕ್ ಮಾಡಿಕೊಳ್ಳಲು ಮೊದಲಿನಿಂದಲೂ ಜಾಗೃತಿ ಮೂಡಿಸುತ್ತ ಬಂದಿದ್ದೀವೆ. ನಮ್ಮ ಕಡೆಯಿಂದಲೂ ಸಹ ತಪ್ಪುಗಳಾಗಿವೆ ಎಂದು ಗುರುದತ್ ಹೆಗಡೆ ವಿವರಿಸಿದರು.
ನಿನ್ನೆ ಮತದಾನ ಎಲ್ಲಾ ಮುಗಿದಿದ್ದು, ಈ ಬಾರಿ ಜಿಲ್ಲೆಯಲ್ಲಿ ಶೇ.74 ರಷ್ಟು ಮತದಾನ ಆಗಿದೆ. ಇನ್ನು ಲೆಕ್ಕ ಮಾಡುತ್ತಿದ್ದು, ಕಳೆದ ಬಾರಿಗಿಂತ ಶೇ. 3 ರಿಂದ 4 ರಷ್ಟು ಮತದಾನ ಜಾಸ್ತಿ ಆಗಿದೆ. ಮತದಾನ ಮಾಡಿದ ಎಲ್ಲಾ ಮತದಾರರಿಗೂ ಗುರುದತ್ ಹೆಗಡೆ ಧನ್ಯವಾದ ಹೇಳಿದರು.