ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಳಸಾ - ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಜಲ ಆಯೋಗವು ಅನುಮೋದನೆ ನೀಡಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹುಬ್ಬಳ್ಳಿಯಲ್ಲಿ ವಿಜಯೋತ್ಸವ ಆಚರಣೆ ಮಾಡಿದರು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದರು.
ಇದೇ ವೇಳೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಕಳೆದ ಐದಾರು ದಶಕಗಳ ಅವಿರತ ಹೋರಾಟದ ತಾತ್ವಿಕ ಅಂತ್ಯದ ಫಲವಾಗಿ ಕೇಂದ್ರ ಜಲ ಆಯೋಗ ಅನುಮತಿ ನೀಡಿದೆ. ಇದಕ್ಕೆ ಕೇಂದ್ರದ ಜಲ ಸಚಿವರು, ಪ್ರಧಾನಿ ನರೇಂದ್ರ ಮೋದಿ, ಹಾಗೂ ರಾಜ್ಯದ ಮುಖ್ಯಮಂತ್ರಿ, ರಾಜ್ಯ ಜಲ ಸಚಿವರ ವಿಶೇಷ ಕಾಳಜಿಯಿಂದ ಕಳಸಾ -ಬಂಡೂರಿಗೆ ಅನುಮೋದನೆ ಸಿಕ್ಕಿದೆ. ಕರ್ನಾಟಕ, ಗೋವಾ, ಮಹಾರಾಷ್ಟ್ರ ಮೂರು ರಾಜ್ಯಗಳ ಜನರಿಗೆ ಅನ್ಯಾಯ ಆಗದ ಹಾಗೇ ವ್ಯಾಜ್ಯ ಇತ್ಯರ್ಥ ಪಡಿಸಿ ರಾಜ್ಯಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸಿದ್ದು ಸಂತಸ ತಂದಿದೆ ಎಂದು ಹೇಳಿದರು.