ಹುಬ್ಬಳ್ಳಿ :ವಾಣಿಜ್ಯ ನಗರಿ ಹುಬ್ಬಳ್ಳಿ ಇನ್ನು ಮುಂದೆ ಮತ್ತಷ್ಟು ಸ್ಮಾರ್ಟ್ ಆಗಲಿದೆ. ಗರದ ಸೌಂದರ್ಯ ಹೆಚ್ಚಿಸಲು ಮಹಾನಗರ ಪಾಲಿಕೆ ಘನತ್ಯಾಜ್ಯ ನಿರ್ವಹಣಾ ವಿಭಾಗದ (ಎಸ್‌ಡಬ್ಲ್ಯೂಎಂ) ಚಟುವಟಿಕೆಗಳಿಗೆ ಪೂರಕವಾಗಿ, ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ 120 ಸಿಸಿ ಟಿವಿ ಕ್ಯಾಮೆರಾಗಳನ್ನು ನೀಡಲಾಗುತ್ತಿದೆ.
ವಾಣಿಜ್ಯನಗರಿಯಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರ ಮೇಲೆ ಕ್ಯಾಮೆರಾ ಕಣ್ಣು ಅವಳಿನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯದಂತೆ ನೋಡಿಕೊಳ್ಳಲು ಹಾಗೂ ಬೇಕಾಬಿಟ್ಟಿ ನಿರ್ವಹಣೆ ಮಾಡದಂತೆ ತಡೆಗಟ್ಟಲು ವಿವಿಧ ಸ್ಥಳಗಳಲ್ಲಿ 24X7 ಕ್ಯಾಮೆರಾಗಳು ನಿಗಾ ಇಡಲಿವೆ.
ಈಗಾಗಲೇ ಪೊಲೀಸ್ ಇಲಾಖೆ ಮತ್ತು ಪಾಲಿಕೆ ವತಿಯಿಂದ ಕೆಲವೆಡೆ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪಾಲಿಕೆಗೆ ಸ್ಮಾರ್ಟ್ ಸಿಟಿ ವತಿಯಿಂದ ಒಟ್ಟು 174 ಕ್ಯಾಮೆರಾಗಳನ್ನು ನೀಡಲಾಗುತ್ತಿದೆ. ಈ ಪೈಕಿ, ಎಸ್‌ಡಬ್ಲ್ಯೂಎಂಗಾಗಿಯೇ 120 ಹಾಗೂ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಲು 54 ಪ್ಯಾನ್ ಟಿಲ್ಡ್ ಜೂಮ್ ಕ್ಯಾಮೆರಾಗಳನ್ನು ನೀಡಲಾಗಿದೆ. ಇಂಟಿಗ್ರೇಟೆಡ್ ಕಮಾಂಡಿಂಗ್ ಸೆಂಟರ್‌ನಲ್ಲಿ ಕ್ಯಾಮೆರಾಗಳ ದೃಶ್ಯ ದಾಖಲಾಗಲಿವೆ.
ಪಾಲಿಕೆಯು ಈಗಾಗಲೇ ಅವಳಿನಗರಗಳಲ್ಲಿ ಕ್ಯಾಮೆರಾಗಳನ್ನು ಎಲ್ಲೆಲ್ಲಿ ಅಳವಡಿಸಬೇಕು ಎಂಬ ಸ್ಥಳಗಳ ಮಾಹಿತಿಯನ್ನು ಸ್ಮಾರ್ಟ್ ಸಿಟಿಯವರಿಗೆ ಕೊಟ್ಟಿದ್ದು, ಹುಬ್ಬಳ್ಳಿಯ 93 ಹಾಗೂ ಧಾರವಾಡದ 27 ಸ್ಥಳಗಳನ್ನು ಗುರುತಿಸಲಾಗಿದೆ. ಸ್ಥಳ ಪರಿಶೀಲನೆ ನಡೆಸಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.