ಹುಬ್ಬಳ್ಳಿ: ಬಡವರಿಗೆ ವಿತರಣೆ ಮಾಡಬೇಕಿದ್ದ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಮಳಿಗೆ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ. ಅಮರಗೋಳದ ಎಪಿಎಂಸಿ ದಾಸ್ತಾನು ಮಳಿಗೆ ಮೇಲೆ ದಾಳಿ ನಡೆಸಿದ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದ ತಂಡ ಐವರನ್ನು ಬಂಧಿಸಿ, 450 ಚೀಲ ಅಕ್ಕಿ, 5 ಲಕ್ಷ ರೂ. ನಗದು ಹಾಗೂ ನಾಲ್ಕು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದೆ.
ಸರ್ಕಾರವು ಬಿಪಿಎಲ್ ಕಾರ್ಡ್ದಾರರಿಗೆ ಉಚಿತವಾಗಿ ಪೂರೈಸುವ ಪಡಿತರ ಅಕ್ಕಿಯನ್ನು ಆರೋಪಿ ಷಣ್ಮುಖಪ್ಪ ಬೆಟಗೇರಿಯು ಸಾರ್ವಜನಿಕರಿಂದ 10 ರಿಂದ 15 ರೂಪಾಯಿಗೆ ಖರೀದಿಸುತ್ತಿದ್ದ. ಬಳಿಕ, ಮಂಜುನಾಥ ಹರ್ಲಾಪುರ ಎನ್ನುವವರಿಗೆ ಮಾರಾಟ ಮಾಡುತ್ತಿದ್ದ. ಮಂಜುನಾಥ 35 ರಿಂದ 40 ರೂ. ಹೆಚ್ಚಿನ ಬೆಲೆಗೆ ಮಾಹಾರಾಷ್ಟ್ರಕ್ಕೆ ಮಾರಾಟ ಮಾಡಲು ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದಾಳಿ ವೇಳೆ ವಶಕ್ಕೆ ಪಡೆದ ಒಟ್ಟು ಅಕ್ಕಿಯ ಮೌಲ್ಯ 9 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿಯಲ್ಲಿ ದೇಶದ 81.35 ಕೋಟಿ ಬಡವರಿಗೆ ಒಂದು ವರ್ಷದವರೆಗೆ ಉಚಿತ ಪಡಿತರ ವಿತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿ ಕಳೆದ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ಆದೇಶ ಹೊರಡಿಸಿತ್ತು. ಪ್ರತಿ ವ್ಯಕ್ತಿಗೆ 5 ಕೆ.ಜಿ ಆಹಾರ ಧಾನ್ಯಗಳನ್ನು ಈ ಕಾಯ್ದೆಯಡಿ ಒದಗಿಸಲಾಗುತ್ತಿದೆ. ಅಂತ್ಯೋದಯ ಅನ್ನ ಯೋಜನೆ (ಎಎವೈ) ಅಡಿಯಲ್ಲಿ ಬರುವ ಕುಟುಂಬಗಳು ಪ್ರತಿ ತಿಂಗಳಿಗೆ 35 ಕೆಜಿ ಆಹಾರ ಧಾನ್ಯಗಳನ್ನು ಪಡೆಯುತ್ತಿವೆ. ಎನ್‌ಎಫ್‌ಎಸ್‌ಎ ಅಡಿಯಲ್ಲಿ ಬಡವರಿಗೆ ಒಂದು ಕೆಜಿ ಅಕ್ಕಿಯನ್ನು 3 ರೂ.ಗೆ ಮತ್ತು ಕೆಜಿ ಗೋಧಿಯನ್ನು 2 ರೂ. ಗೆ ನೀಡಲಾಗುತ್ತಿದೆ.