ಉದ್ಯಮಿ ನಿವಾಸದ ಮೇಲೆ ಸಿಸಿಬಿ ದಾಳಿ: ಮೂರು ಕೋಟಿ ನಗದು ವಶ ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉದ್ಯಮಿಯೊಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಬರೋಬ್ಬರಿ 3 ಕೋಟಿ ಹಣವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಕೇಶ್ವಾಪೂರದ ರಮೇಶ್ ಬೊಣಗೇರಿ ಎಂಬವರ ಮನೆ ಮತ್ತು ಕಚೇರಿ ಮೇಲೆ ಸಿಸಿಬಿ ದಾಳಿ ನಡೆಸಿದ್ದು, ಈ ವೇಳೆ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮೂರು ಕೋಟಿ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಡಿವೈಎಸ್ಪಿ ನಾರಾಯಣ ಬರಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ನಿನ್ನೆ ತಡರಾತ್ರಿ ಖಚಿತ ಮಾಹಿತಿ ಮೇರೆಗೆ ಹುಬ್ಬಳ್ಳಿ ಧಾರವಾಡ ಸಿಸಿಬಿ ಪೊಲೀಸರು ಪ್ರತಿಷ್ಠಿತ ಉದ್ಯಮಿ ರಮೇಶ್ ಬೊಣಗೇರಿಯ ಭವಾನಿ ನಗರದ ಮನೆಯ ಮೇಲೆ ದಾಳಿ ಮಾಡಿದ್ದು, ದಾಳಿಯ ಸಮಯದಲ್ಲಿ ಮೂರು ಕೋಟಿ ಹಣ ಪತ್ತೆಯಾಗಿದೆ. ಇಲ್ಲಿಯವರೆಗೆ ಹಣದ ಆದಾಯದ ಮೂಲ ಮಾತ್ರ ಬಯಲಿಗೆ ಬಂದಿಲ್ಲ. ಉದ್ಯಮಿ ರಮೇಶ್ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟದ ವ್ಯಾಪಾರಿಯಾಗಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಕೃಷಿ ಇಲಾಖೆಗೂ ಸಹ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಸರಬರಾಜು ಮಾಡುತ್ತಿದ್ದಾರೆ. ಇವರ ಮನೆಯಲ್ಲಿ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿಟ್ಟುಕೊಂಡಿರುವ ಮಾಹಿತಿ ಪಡೆದ ಸಿಸಿಬಿ ಆರ್ಥಿಕ ಅಪರಾಧದ ವಿಭಾಗದ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಹಣ ಮಾತ್ರ ವಶಪಡಿಸಿಕೊಂಡಿರುವ ಪೊಲೀಸರು, ಹಣ ಮೂಲದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.
ಉದ್ಯಮಿ ನಿವಾಸದ ಮೇಲೆ ಸಿಸಿಬಿ ದಾಳಿ: ಮೂರು ಕೋಟಿ ನಗದು ವಶ ಇನ್ನೂ ಸದ್ಯ ಇದು ಸಿವಿಲ್ ಪ್ರಕರಣವಾಗಿರುವ ಹಿನ್ನೆಲೆ, ಪೊಲೀಸರು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳು ಸಿಸಿಬಿ ಪೊಲೀಸರ ಜೊತೆ ಸೇರಿಕೊಂಡು ಹಣ ಮೂಲದ ಪತ್ತೆಯ ತನಿಖೆ ಆರಂಭಿಸಿದ್ದಾರೆ. ಈ ಹಣವು ಅಕ್ರಮ ಹಣವಾಗಿದ್ದರೆ ಉದ್ಯಮಿ ರಮೇಶ್ ಬಂಧನವಾಗುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸ್ ಅಧಿಕಾರಿಗಳಿಗೆ ಕಮಿಷನರ್ ರಮಣ ಗುಪ್ತಾ ಅಭಿನಂದನೆ ಸಲ್ಲಿಸಿ 25 ಸಾವಿರ ನಗದು ಹಣ ಬಹುಮಾನ ಘೋಷಿಸಿದ್ದಾರೆ.
ಬಿಜೆಪಿ ಶಾಸಕನ ಮಗ ಲೋಕಾಯುಕ್ತ ಬಲೆಗೆ :ಇತ್ತೀಚೆಗೆ ನಡೆದ ಲೋಕಾಯುಕ್ತ ದಾಳಿ ದೇಶಾದ್ಯಂತ ಸದ್ದು ಮಾಡಿತ್ತು. ಅದರ ಬೆನ್ನಲ್ಲೇ ಹುಬ್ಬಳಿಯ ಉದ್ಯಮಿ ನಿವಾಸದಲ್ಲಿ ಮೂರು ಕೋಟಿ ನಗದು ಸಿಕ್ಕಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ. ಮೊನ್ನೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ, BWSSB ಚೀಫ್ ಅಕೌಂಟೆಂಟ್ ಪ್ರಶಾಂತ್ ಅವರು 40 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಚೀಫ್ ಅಕೌಂಟೆಂಟ್ ಆಗಿರುವ ಪ್ರಶಾಂತ್, ಒಂದು ಟೆಂಡರ್ ವಿಚಾರವಾಗಿ ಸುಮಾರು 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಈ ವೇಳೆ ತಮ್ಮ ಕಚೇರಿಯಲ್ಲಿ ಸುಮಾರು 40 ಲಕ್ಷ ರೂ ಲಂಚ ಪಡೆಯುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದರು. ಅದಾದ ಬಳಿಕ ಅವರ ನಿವಾಸದ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಸುಮಾರು 6 ಕೋಟಿಗೂ ಹೆಚ್ಚು ನಗದು ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ :40 ಲಕ್ಷ ರೂ ಲಂಚ ಪಡೆಯುವಾಗ ಶಾಸಕರ ಪುತ್ರ ಲೋಕಾಯುಕ್ತ ಬಲೆಗೆ