ಧಾರವಾಡ:40 ಪರ್ಸೆಂಟ್ ಕಮಿಷನ್ ಆರೋಪ ಅಧಿವೇಶನದಲ್ಲಿ ಒಮ್ಮೆಯೂ ಚರ್ಚೆಗೆ ಬರಲಿಲ್ಲ ಎಂದುಗುತ್ತಿಗೆದಾರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪಗಳ ವಿಚಾರಕ್ಕೆ ಸಂಬಂಧಿಸಿದಂತೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ನಾವು ಇದುವರೆಗೂ ಕಾಮಗಾರಿ ಪ್ರಗತಿ ಆಧರಿಸಿ ಹಣ ಮಂಜೂರು ಮಾಡಿದ್ದೇವೆ. ಜಿಲ್ಲೆಯ ನವಲಗುಂದದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಈ ವಿಷಯ ಪ್ರಸ್ತಾಪಿಸದೆ ಅಧಿವೇಶನ ಮುಗಿದ ಮೇಲೆ ವಿಷಯ ತರುತ್ತಾರೆ ಎಂದರು.
ಕೆಂಪಣ್ಣ ಏನು ಕೆಲಸ ಮಾಡುತ್ತಾರೋ ಗೊತ್ತಿಲ್ಲ. ಸಣ್ಣಪುಟ್ಟ ಕೆಲಸ ಮಾಡುತ್ತಾರೆ ಅಂತಾ ಗೊತ್ತು. ಅವರು ನಮ್ಮ ಕಚೇರಿಗೂ ಬಂದಿದ್ದರು. ಹಿರಿಯರು ಅಂತಾ ಗೌರವ ಕೊಟ್ಟಿದ್ದೆ. ಬಿಳಿ ಹಾಳೆಯಲ್ಲಿ ಅರ್ಜಿ ಬರೆದುಕೊಂಡ ಬಂದಿದ್ದರು. ನಿಮ್ಮ ದೂರು ಸರ್ಕಾರಕ್ಕೆ ಹೇಳಿ, ಆದರೆ ನೀವು ಬಳಸಿದ ಭಾಷೆ ಸರಿ ಇಲ್ಲ ಎಂದಿದ್ದೆ. ಆಗ ಅವರು ಅರ್ಜಿ ಬರೆದು ಕೊಟ್ಟಿದ್ದಾರೆ. ನಾನು ಸಹಿ ಮಾಡಿ ಕೊಡುತ್ತಿದ್ದೇನೆ ಎಂದಿದ್ದರು, ಅದು ಸತ್ಯ ಎಂದು ಹೇಳಿದರು.
ಪಂಚಮಸಾಲಿ ಮೀಸಲಾತಿ ಸಂಬಂಧ ಮಧ್ಯಂತರ ವರದಿ ಸಲ್ಲಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಹಿಂದುಳಿದ ವರ್ಗಗಳ ಆಯೋಗದಿಂದ ಸಲ್ಲಿಕೆಯಾಗಿರುವ ವರದಿ ಸಲ್ಲಿಕೆ ಬಗ್ಗೆ ಮಾಧ್ಯಮದಲ್ಲಿ ನೋಡಿದ್ದೇನೆ. ಈಗ ಮಧ್ಯಂತರ ವರದಿ ಸಲ್ಲಿಕೆಯಾಗಿದೆ. ಪೂರ್ಣ ಪ್ರಮಾಣದ ವರದಿ ಸಲ್ಲಿಕೆಯಾಗಲಿ. ಸರ್ಕಾರ ಮತ್ತು ಸಮಾಜದ ಮಧ್ಯೆ ನಮ್ಮದು ತಂತಿ ಮೇಲಿನ ನಡಿಗೆ ಆಗಿದೆ. ಸಮಾಜ ಮತ್ತು ಸರ್ಕಾರ ಎರಡನ್ನೂ ನೋಡಬೇಕು. ಇದನ್ನು ಸ್ವಾಮೀಜಿಗಳು ಅರ್ಥ ಮಾಡಿಕೊಳ್ಳುತ್ತಾರೆ ಎಂದುಕೊಂಡಿದ್ದೇವೆ. ಸಿಎಂ ಆಗಿ ಒಂದೇ ಸಮಾಜ ನೋಡಲು ಆಗುವುದಿಲ್ಲ. ಎಲ್ಲ ಸಮಾಜವನ್ನೂ ನೋಡಬೇಕಾಗುತ್ತದೆ. ನಮ್ಮ ಪ್ರಮಾಣಿಕ ಪ್ರಯತ್ನ ನಡೆಯುತ್ತಿದೆ. ಸಿಎಂ ವರದಿ ತರಿಸಿಕೊಂಡೇ ಕ್ರಮ ಕೈಗೊಳ್ಳಬೇಕಾಗುತ್ತದೆ. ಈಗ ಬಂದಿರುವುದು ಮಧ್ಯಂತರ ವರದಿ. ಪಂಚಮಸಾಲಿ ಸಮಾಜದ 3ಬಿ ಸೇರಿಸಿದ್ದೇ ಬಿಜೆಪಿ. ಅದರಿಂದಾಗಿಯೇ 2ಬಿ ಕೇಳುವಂತಾಗಿದೆ ಎಂದು ಇದೇ ವೇಳೆ ಹೇಳಿದರು.