ಹುಬ್ಬಳ್ಳಿ :ಜಿಪಂ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 2ನೇ ದಿನವೂ ವಿನಯ್ ಕುಲಕರ್ಣಿ ವಿಚಾರಣೆ ಮುಂದುವರೆಸಿದ್ದಾರೆ.
ನಗರದ ಗೋಕುಲ್ ರಸ್ತೆಯಲ್ಲಿರುವ ಸಿಎಆರ್ ಮೈದಾನದಲ್ಲಿರುವ ಕಚೇರಿಯಲ್ಲಿ ಸಿಬಿಐ ವಿಚಾರಣೆ ನಡೆಸಲಾಗುತ್ತಿದೆ. ಸಿಎಆರ್ ಪೇದೆಗಳ ಕ್ವಾರ್ಟರ್ಸ್‌ನಲ್ಲಿಯೇ ಕಳೆದ ರಾತ್ರಿ ವಿನಯ್ ಕುಲಕರ್ಣಿ ಉಳಿದುಕೊಳ್ಳಲು ಪ್ರತ್ಯೇಕ ಕೊಠಡಿ ನೀಡಲಾಗಿತ್ತು. ಇಂದು ಬೆಳಗ್ಗೆಯಿಂದಲೂ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸಿಬಿಐನಿಂದ 2ನೇ ದಿನವೂ ಮುಂದುವರೆದ ವಿನಯ್ ಕುಲಕರ್ಣಿ ವಿಚಾರಣೆ.. ಇನ್ನೂ ಎರಡು ದಿನಗಳ ಕಾಲ ಸಿಬಿಐ ವಶದಲ್ಲಿರಲಿದ್ದು, ಸಿಬಿಐ ತನಿಖೆ ವಿನಯ್ ಕುಲಕರ್ಣಿಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ಇದೆ. ಕೊಲೆ ನಡೆದ ವೇಳೆ ತಾವು ದೆಹಲಿಯಲ್ಲಿರುವುದಾಗಿ ದಾಖಲೆ ಸೃಷ್ಟಿ ಮಾಡಿದ್ದು, ಸಿಬಿಐ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ಕೊಡದ ಕುಲಕರ್ಣಿ ಸತಾಯಿಸುತ್ತಿದ್ದಾರೆ. ನಿನ್ನೆ ವಿನಯ್ ಕುಲಕರ್ಣಿ ಹಾಗೂ ಆಪ್ತ ಕಾರ್ಯದರ್ಶಿ ವಿಚಾರಣೆ ನಡೆಸಲಾಗಿತ್ತು. ಕೊಲೆಗೆ ಒಳಸಂಚು ರೂಪಿಸಿದ್ದ ಸ್ಥಳಗಳಿಗೆ ವಿನಯ್ ಕುಲಕರ್ಣಿಯನ್ನ ಕರೆದೊಯ್ಯುವ ಸಾಧ್ಯತೆಯಿದೆ.
ಇನ್ನು, ಯೋಗೇಶ್ ಗೌಡ ಗೌಡರ ಹತ್ಯೆ ಪ್ರಕರಣ ಸಂಬಂಧ ಸಿಬಿಐ ಸೋಮಲಿಂಗ ನ್ಯಾಮಗೌಡ ಅವರನ್ನು ಹುಬ್ಬಳ್ಳಿ ಸಿಎಆರ್ ಮೈದಾನದಲ್ಲಿ ವಿಚಾರಣೆ ನಡೆಸಿದ್ದಾರೆ. ಅಲ್ಲದೇ ಅವರ ಕಾರು ಚಾಲಕನನ್ನು ಸಹ ಧಾರವಾಡ ಉಪನಗರ ಠಾಣೆಯಿಂದ ಸಿಬಿಐ ಅಧಿಕಾರಿಗಳು ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಎಪಿಎಂಸಿ ಜಂಟಿ ನಿರ್ದೇಶಕನಾಗಿದ್ದ ಸೋಮು ನ್ಯಾಮಗೌಡ ಅವರ ಕಾರು ಚಾಲಕನಾಗಿ ಗುತ್ತಿಗೆ ಆಧಾರದ ಮೇಲಿದ್ದ ಪುಂಡಲೀಕ ಮೊರಬ ಅವರಿಗೆ ಸಿಬಿಐ ಬುಲಾವ್ ನೀಡಿದೆ. ನ್ಯಾಮಗೌಡ ಅವರು ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಕಾರ್ಯದರ್ಶಿ ಸಹ ಆಗಿದ್ದರು. ಆ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದೀಗ ಅವರ ಕಾರು ಚಾಲಕನನ್ನು ಸಿಬಿಐ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು ಮತ್ತಷ್ಟು ಕುತೂಹಲ ಕೆರಳಿಸಿದೆ.