ಹುಬ್ಬಳ್ಳಿ:ರಾಜ್ಯಾದ್ಯಂತ ಸಾಕಷ್ಟು ಮಳೆಯಾಗುತ್ತಿದೆ. ಇದರಿಂದ ವಾತಾವರಣದಲ್ಲಿ ಏರುಪೇರು ಉಂಟಾಗಿ ಹೊಸ ಹೊಸ ಖಾಯಿಲೆಗಳು ಜನರನ್ನು ಕಾಡುತ್ತಿದೆ. ಅದರಲ್ಲೂ ನಿರಂತರ ಮಳೆ ಹಾಗೂ ತಂಪು ವಾತಾವರಣದಿಂದ ನೆಗಡಿ, ಕೆಮ್ಮು ಹಾಗೂ ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳ ಕಾಟ ಒಂದೆಡೆಯಾದರೆ, ಹೊಸದಾಗಿ 'ಮದ್ರಾಸ್ ಐ' ಎಂಬ ಕಣ್ಣು ನೋವಿನ ಬಾಧೆ ಜಿಲ್ಲೆಯ ಜನತೆಯನ್ನು ತೀವ್ರವಾಗಿ ಕಾಡುತ್ತಿದೆ.
ಡೆಂಘೀ, ಚಿಕೂನ್ ಗುನ್ಯಾದಂತಹ ಸಾಂಕ್ರಾಮಿಕ ರೋಗಗಳು ಸೊಳ್ಳೆಗಳಿಂದ ಬಂದರೆ ಅಡಿನೊ ವೈರಾಣುವಿನಿಂದ ಮದ್ರಾಸ್ ಐ (Madras eye virus) ಎಂಬ ರೋಗ ಹರಡುತ್ತಿದೆ. ದಿನದಿಂದ ದಿನಕ್ಕೆ ಧಾರವಾಡ ಜಿಲ್ಲೆಯಾದ್ಯಂತ ಈ ರೋಗ ಹೆಚ್ಚಳವಾಗುತ್ತಿದ್ದು, ಮಕ್ಕಳು ಹಾಗೂ ಯುವ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುತ್ತಿರುವ ಕಾರಣ ಜನರಲ್ಲಿ ಭಯ ಮೂಡಿಸಿದೆ. ಹವಾಮಾನ ವೈಪರೀತ್ಯದಿಂದ ಮತ್ತು ನಿರಂತರ ಮಳೆಯಿಂದಾಗಿ ಈ ರೋಗ ಬರುತ್ತಿದ್ದು, ಮಳೆಗಾಲ ಮುಗಿಯುವವರೆಗೂ ವಿಶೇಷವಾಗಿ ಮಕ್ಕಳು ತುಸು ಎಚ್ಚರ ವಹಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ರೋಗದ ಲಕ್ಷಣಗಳು:ಈ ರೋಗ ಬಂದಾಗ ವ್ಯಕ್ತಿಯ ಎರಡು ಕಣ್ಣುಗಳಲ್ಲಿ ಉರಿ ಬರುತ್ತದೆ. ಊತದ ಸಮಸ್ಯೆ ಕಂಡು ಬರುತ್ತದೆ. ಕಣ್ಣಿನ ಬಿಳಿ ಭಾಗ ಕೆಂಪಾಗುವುದು, ಕಣ್ಣುಗಳಿಂದ ನಿರಂತರವಾಗಿ ನೀರು ಬರುವುದು, ಕಣ್ಣಲ್ಲಿ ಪಿಚ್ಚು ಬರುವುದು ಮತ್ತು ಕಣ್ಣು ಊದಿಕೊಳ್ಳುವುದು ಮದ್ರಾಸ್ ಐ ರೋಗದ ಮುಖ್ಯ ಲಕ್ಷಣಗಳಾಗಿವೆ. ಮದ್ರಾಸ್ ಐ ಪೀಡಿತ ಜನರಿಗೆ ನೋವು ನಿವಾರಕ ಮಾತ್ರೆ, ಕಣ್ಣಿನ ಡ್ರಾಪ್ಸ್ ನೀಡುವುದು ಮತ್ತು ಕಣ್ಣಿಗೆ ಕೂಲಿಂಗ್ ಗ್ಲಾಸ್ ಅಥವಾ ಕಪ್ಪು ಕನ್ನಡಕ ಧರಿಸಬೇಕಾಗುತ್ತದೆ.