ಹುಬ್ಬಳ್ಳಿ :ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹತ್ವಾಕಾಂಕ್ಷೆಯ 'ಶಕ್ತಿ ಯೋಜನೆ' ಯಶಸ್ಸಿಗಾಗಿ ಮೊದಲ ತಿಂಗಳು ಗರಿಷ್ಠ ದಿನಗಳ ಕಾಲ ಕರ್ತವ್ಯ ನಿರ್ವಹಿಸಿದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ನಗದು ಬಹುಮಾನ ಮಂಜೂರು ಮಾಡಿದ್ದಾರೆ.
ಸರ್ಕಾರಿ ಬಸ್ನಲ್ಲಿ ರಾಜ್ಯದೊಳಗೆ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಸಲುವಾಗಿ ಹಾಗೂ ಮಹಿಳಾ ಸಬಲೀಕರಣದ ಉದ್ದೇಶವನ್ನಿಟ್ಟುಕೊಂಡು ಆರಂಭಿಸಿರುವ ಶಕ್ತಿ ಯೋಜನೆಗೆ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ. ಈ ನೂತನ ಯೋಜನೆ ಜಾರಿಯಾಗಿ ಒಂದೂವರೆ ತಿಂಗಳು ಕಳೆದರೂ ಮಹಿಳೆಯರ ಉತ್ಸಾಹ ಕಡಿಮೆಯಾಗಿಲ್ಲ.
ಶಕ್ತಿ ಯೋಜನೆಯ ಯಶಸ್ವಿ ಅನುಷ್ಠಾನದಲ್ಲಿ ಸಂಸ್ಥೆಯ ಎಲ್ಲ ಸಿಬ್ಬಂದಿ ಅದರಲ್ಲೂ ಮುಖ್ಯವಾಗಿ ಪ್ರಯಾಣಿಕರೊಂದಿಗೆ ನೇರ ಸಂಪರ್ಕಕ್ಕೆ ಬರುವ ಚಾಲನಾ ಸಿಬ್ಬಂದಿ ಕಾರ್ಯಕ್ಷಮತೆ ಶ್ಲಾಘನೀಯ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಅಭಿನಂದಿಸಿದ್ದಾರೆ. ಚಾಲನಾ ಸಿಬ್ಬಂದಿಗಳ ಹಾಜರಾತಿ ಉತ್ತೇಜಿಸುವ ದೃಷ್ಟಿಯಿಂದ ಯೋಜನೆಯ ಮೊದಲ ತಿಂಗಳ ಅವಧಿಯಲ್ಲಿ ಅತಿ ಹೆಚ್ಚು ದಿನ ಕರ್ತವ್ಯ ನಿರ್ವಹಿಸಿದ ಚಾಲಕರು, ನಿರ್ವಾಹಕರುಗಳಿಗೆ ನಗದು ಬಹುಮಾನ ಮಂಜೂರು ಮಾಡಿದ್ದಾರೆ. ಜೂನ್ 11 ರಿಂದ ಜುಲೈ10 ವರೆಗಿನ ಅವಧಿಯಲ್ಲಿ ಗರಿಷ್ಠ ದಿನಗಳ ಕರ್ತವ್ಯ ನಿರ್ವಹಿಸಿದ ಪ್ರತಿ ಘಟಕದ 5 ಚಾಲಕರು ಹಾಗೂ 5 ನಿರ್ವಾಹಕರಿಗೆ ನಗದು ಬಹುಮಾನ ಮಂಜೂರು ಮಾಡಲಾಗಿದೆ.