ಹುಬ್ಬಳ್ಳಿ:ಅನ್ಯ ಧರ್ಮಗಳ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆಂಬ ಆರೋಪದ ಮೇಲೆ ಶ್ರೀರಾಮಸೇನೆ ಸಂಘಟನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಅವರ ಕಾರ್ಯಕರ್ತರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿ ಮುಸ್ಲಿಂ ನಾಯಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ್ ಅವರಿಗೆ ದೂರು ನೀಡಿದರು.
ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದ ಗಣೇಶ ವಿಸರ್ಜನೆ ಕಾರ್ಯಕ್ರಮಕ್ಕೆ ಗುರುವಾರ ಭೇಟಿ ನೀಡಿದ್ದ ಪ್ರಮೋದ್ ಮುತಾಲಿಕ್, ಗಣೇಶ ದರ್ಶನ ಪಡೆದುಕೊಂಡ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುವಾಗ ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂದು ಮುಸ್ಲಿಂ ನಾಯಕರು ಆರೋಪಿಸಿದ್ದಾರೆ.
ಮುಖಂಡ ಅಸ್ಪಾಕ್ ಕುಮಟಾಕರ್ ಮಾತನಾಡಿ, ಕರ್ನಾಟಕದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ, ದಲಿತರು ಪರಸ್ಪರ ಪ್ರೀತಿ, ವಿಶ್ವಾಸ, ಏಕತೆಯಿಂದ ಜೀವನ ಮಾಡುತ್ತಿದ್ದೇವೆ. ಆದರೆ ಪ್ರಮೋದ್ ಮುತಾಲಿಕ್ ಅವಹೇಳನಕಾರಿ ಮತ್ತು ಪ್ರಚೋದನಕಾರಿ ಹೇಳಿಕೆ ನೀಡಿ ಶಾಂತಿಯನ್ನು ಕದಡುವ ಕೆಲಸ ಮಾಡಿದ್ದಾರೆ. ಈ ಸಂಬಂಧ ಸಾರ್ವಜನಿಕರೊಂದಿಗೆ ಬಂದು ಪೊಲೀಸ್ ಕಮಿಷನರ್ಗೆ ಮನವಿಯನ್ನು ಕೊಟ್ಟಿದ್ದೇವೆ. ಪ್ರಮೋದ್ ಮುತಾಲಿಕ್ ಅವರ ಮೇಲೆ ತಕ್ಷಣ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಈ ಜಿಲ್ಲೆಯಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.