ಹುಬ್ಬಳ್ಳಿ:ಕಳೆದ ಮೂರು ವರ್ಷಗಳಿಂದ ಭೀಕರ ಬರಗಾಲದಿಂದ ಬೇಸತ್ತ ಜಿಲ್ಲೆಯ ಅನ್ನದಾತನ ಮೊಗದಲ್ಲಿ ಇದೀಗ ಡೊಣ್ಣೆ ಮೆಣಸಿನಕಾಯಿ (ಕ್ಯಾಪ್ಸಿಕಂ) ಬೆಳೆ ಮಂದಹಾಸ ಮೂಡಿಸಿದೆ.
ರೈತನಿಗೆ ಆರ್ಥಿಕ ಹೊರೆಯನ್ನು ತಗ್ಗಿಸುವ ಈ ಬೆಳೆಯು, ಕೆಂಪು, ಕಪ್ಪು ಹಾಗೂ ಮರಳು ಮಿಶ್ರಿತ ಪ್ರದೇಶದಲ್ಲಿ ಬೆಳೆಯುತ್ತದೆ. ಕಳೆದ ಸುಮಾರು ಮೂರು ವರ್ಷಗಳ ಬರಗಾಲ ಹಾಗೂ ಈ ವರ್ಷದ ನೆರೆ ಹಾವಳಿಯ ನಡುವೆಯೂ ಈ ಬೆಳೆ ರೈತನ ಕಣ್ಣೀರನ್ನು ಒರೆಸುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಾರದಿದ್ದರೂ ತಕ್ಕ ಮಟ್ಟಿಗೆ ಬೆಳೆ ಬಂದಿರುವುದು ರೈತನ ಕಷ್ಟವನ್ನು ಸ್ವಲ್ಪವಾದರೂ ನೀಗಿಸುತ್ತಿದೆ.
ಉತ್ತರ ಕರ್ನಾಟಕದ ಹಾವೇರಿ, ಗದಗ, ಬಾಗಲಕೋಟ, ಧಾರವಾಡ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ರೈತನ ಪಾಲಿಗೆ ವಾಣಿಜ್ಯ ಬೆಳೆಯಾಗಿದೆ. ಮೊದಲಿಗೆ ಮಡಿ ಮಾಡುವ ಮೂಲಕ ಪ್ರಾರಂಭಗೊಂಡು, ಕನಿಷ್ಠ 2.5 ಅಡಿ ಅಂತರದಲ್ಲಿ ಗಿಡಗಳನ್ನು ನಾಟಿ ಮಾಡಲಾಗುತ್ತದೆ. ಇದು ಎರಡು ತಿಂಗಳಲ್ಲಿ ಬೆಳೆ ಬರಲು ಪ್ರಾರಂಭವಾಗುತ್ತದೆ. ಇಲ್ಲಿ ಬೆಳೆದ ಬೆಳೆ ಅಂತರ ರಾಜ್ಯಗಳಿಗೆ ರಫ್ತಾಗುತ್ತದೆ.