ಧಾರವಾಡ: ಪಶುಸಂಗೋಪನೆ ಮತ್ತು ಪಶುವೈದ್ಯ ಇಲಾಖೆಯು ಕೃಷಿ ಪೂರಕ ಚಟುವಟಿಕೆಗಳು, ಹೈನುಗಾರಿಕೆ ಮೂಲಕ ಉತ್ಪಾದನೆ ಚಟುವಟಿಕೆಗಳನ್ನು ಹೆಚ್ಚಿಸಲು ವಿಫುಲ ಅವಕಾಶ ಹೊಂದಿರುವ ಇಲಾಖೆಯಾಗಿದೆ. ಖಾಲಿ ಹುದ್ದೆಗಳ ಸಂಖ್ಯೆ ಅಧಿಕವಿದೆಯಾದರೂ ಇಲಾಖೆಯ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಹಿನ್ನಡೆಯಾಗಬಾರದು ಎಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್ ಹೇಳಿದರು.
ರಾಯಾಪುರದ ಕೆಎಂಎಫ್ ತರಬೇತಿ ಕೇಂದ್ರದಲ್ಲಿ ನಡೆದ ಜಿಲ್ಲೆಯ ಇಲಾಖಾ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿ, ಪಶುವೈದ್ಯರು ಹಳ್ಳಿಗಳಿಗೆ ತೆರಳಿ ಪಶು ಸಾಕಾಣಿಕೆದಾರರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ನಿಟ್ಟಿನಲ್ಲಿ ಪ್ರತಿನಿತ್ಯ ಖುದ್ದಾಗಿ ವಾಟ್ಸಪ್ ಮೂಲಕ ತಮಗೆ ಮಾಹಿತಿ ಸಲ್ಲಿಸಬೇಕು. ನಿಮ್ಮ ಸಮಸ್ಯೆಗಳಿದ್ದರೆ ಹೇಳಿ ಆದರೆ ರೈತರ ಕರೆಗಳಿಗೆ ತಕ್ಷಣಕ್ಕೆ ಸ್ಪಂದಿಸುವ ಮನೋಭಾವವನ್ನು ವೈದ್ಯರು ಬೆಳೆಸಿಕೊಳ್ಳಬೇಕು ಎಂದರು.
ಉಪನಿರ್ದೇಶಕರು, ಸಹಾಯಕ ನಿರ್ದೇಶಕರು ಸೇರಿ ಎಲ್ಲಾ ಪಶುವೈದ್ಯಾಧಿಕಾರಿಗಳು ನಿರಂತರವಾಗಿ ಗ್ರಾಮೀಣ ಭಾಗಗಳಿಗೆ ತೆರಳಬೇಕು. ರೈತರು, ಪಶು ಸಾಕಾಣಿಕೆದಾರರಿಗೆ ಸಕಾಲಕ್ಕೆ ಔಷಧ ಒದಗಿಸಬೇಕು. ಚೀಟಿ ಬರೆದು ಖಾಸಗಿಯಾಗಿ ಖರೀದಿಸಲು ಹೇಳಬಾರದು. ವ್ಯಾಕ್ಸಿನ್ ಬಗ್ಗೆ ಅಧಿಕಾರಿಗಳು ಹೆಚ್ಚು ನಿರ್ಲಕ್ಷವಹಿಸುತ್ತಿರುವ ರಾಜ್ಯದ ವಿವಿಧ ಭಾಗಗಳಿಂದ ದೂರುಗಳು ಬಂದಿವೆ. ವ್ಯಾಕ್ಸಿನ್ ಹಾಗೂ ಚಿಕಿತ್ಸೆಯ ಬಗ್ಗೆ ನಿಷ್ಕಾಳಜಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.