ಹುಬ್ಬಳ್ಳಿ:ನಗರದ ಹಳೆಯ ಕೋರ್ಟ್ ಹತ್ತಿರದ ಲೋಕೋಪಯೋಗಿ ಇಲಾಖೆಯ ಸಿಟಿಸಿನಂ. 498 ರಲ್ಲಿನ 100x106 ಅಡಿ ಜಾಗವನ್ನು ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಮತ್ತೆ 30 ವರ್ಷಗಳವರೆಗೆ ಲೀಸ್ ಆಧಾರದ ಮೇಲೆ ಮುಂದುವರೆಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತು. ಲೋಕೋಪಯೋಗಿ ಇಲಾಖೆ ಈ ಜಾಗವನ್ನು ಜಿಲ್ಲಾಧಿಕಾರಿ ಆದೇಶದ ಮೇಲೆ 28-08-1992 ಹಾಗೂ 05-02-1993ರಲ್ಲಿ ವಾರ್ಷಿಕ 3,000 ರೂಪಾಯಿ ಬಾಡಿಗೆಯಂತೆ ಲೀಸ್‌ಗೆ ನೀಡಲಾಗಿತ್ತು. ಇದರ ಲೀಸ್ ಅವಧಿ 02-04-2023ಕ್ಕೆ ಮುಕ್ತಾಯವಾಗಿದ್ದು, ಮತ್ತೆ ಸಾಯಿಬಾಬಾ ಭಕ್ತ ಮಂಡಳಿ ಲೀಸ್ ಅವಧಿ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.
ಈ ಮನವಿಗೆ ಸ್ಪಂದಿಸಿದ ಸರ್ಕಾರ 05-02-2023ಕ್ಕೆ ಪೂರ್ವಾನ್ವಯವಾಗುವಂತೆ ವಾರ್ಷಿಕ ರೂ. 20,000 ನಿಗದಿಪಡಿಸಿ ಮುಂದಿನ 30 ವರ್ಷಗಳ ಅವಧಿಯವರೆಗೆ ಲೀಸ್ ಅವಧಿ ವಿಸ್ತರಿಸಿದೆ. ಇದೇ ವೇಳೆ ಜಿಲ್ಲೆಗೆ ಸಂಬಂಧಿಸಿ ಮತ್ತೊಂದು ಮಹತ್ವದ ನಿರ್ಧಾರ ಸರ್ಕಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ.16.18 ಕೋಟಿಗಳ ಮತ್ತು ಸ್ನಾತಕ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ. 11.00 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟ ಆಡಳಿತಾತ್ಮಕವಾಗಿ ಅನುಮೋದಿಸಿದೆ.