ಹುಬ್ಬಳ್ಳಿ: ಜಿಲ್ಲೆಯಲ್ಲಿ ಹೇಗಾದರೂ ಮಾಡಿ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸಲೇಬೇಕೆಂದು ಧಾರವಾಡ ಜಿಲ್ಲಾಡಳಿತ ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದೆ. ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುವ ಮೂಲಕ ಮತದಾರ ಪ್ರಭುಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ವೋಟ್ ಮಾಡಿದವರಿಗೆ ಬಂಪರ್ ಆಫರ್ ಜಿಲ್ಲಾಡಳಿತದ ಈ ಪ್ರಯತ್ನಕ್ಕೆ ಬಾರ್ ಮಾಲೀಕರೊಬ್ಬರು ಕೈಜೋಡಿಸಿ ಮತದಾನ ಪ್ರಮಾಣ ಹೆಚ್ಚಿಸಲು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ನಗರದ ಕೋರ್ಟ್ ವೃತ್ತದ ಬಳಿ ಇರುವ ಕರ್ನಾಟಕ ವೈನ್ ಸ್ಟೋರ್ ಮಾಲೀಕರಾದ ವಿನಾಯಕ ಆಕಳವಾಡಿಯವರು ಜಿಲ್ಲಾಡಳಿಕ್ಕೆ ಸಾಥ್ ನೀಡುವ ಮೂಲಕ ಮದ್ಯ ಪ್ರಿಯರನ್ನು ಮತದಾನದಲ್ಲಿ ಭಾಗವಹಿಸುವಂತೆ ಮಾಡಲು ವಿನೂತನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಮತದಾನ ಮಾಡಿ ಬಂದ ಮದ್ಯ ಪ್ರಿಯರಿಗೆ ಬಂಪರ್ ಆಫರ್ ನೀಡುತ್ತಿದ್ದಾರೆ. ನಾಳೆ ನಡೆಯಲಿರುವ ಲೋಕಸಭಾ ಚುನಾವಣೆಗೆ ಮತದಾನ ಮಾಡಿದ ಶಾಹಿ ಗುರುತು ತೋರಿಸಿದರೆ ಶೇ. 3%ರ ಡಿಸ್ಕೌಂಟ್ ಕೂಡ ನೀಡಲಾಗುತ್ತದೆ. ಮತದಾನದ ಮರುದಿನ ಅಂದ್ರೇ ಏಪ್ರಿಲ್24 ರಂದು ಈ ಆಫರ್ ಲಭ್ಯವಿದೆ. ಮದ್ಯ ಪ್ರಿಯರಿಗೆ ಮತದಾನದ ಜಾಗೃತಿ ಜತೆಗೆ ಮತ ಪ್ರಮಾಣವನ್ನು ಹೆಚ್ಚಿಸುವ ವಿನೂತನ ಪ್ರಯೋಗ ಇದಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಇದು ಮೊದಲ ಬಾರಿಗೆ ಇಂಥ ವಿಭಿನ್ನ ಮತದಾನ ಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ರಾಜಕೀಯ ಪಕ್ಷಗಳು ನೀಡುವ ಮದ್ಯದ ಆಮಿಷಕ್ಕೆ ಬಲಿಯಾಗಿ ಮತ ಮಾರಿಕೊಳ್ಳಬಾರದು. ಮದ್ಯ ಪ್ರಿಯರು ಪ್ರಾಮಾಣಿಕವಾಗಿ ತಮ್ಮ ಹಕ್ಕನ್ನು ಚಲಾಯಿಸಿಬೇಕೆಂಬ ಉದ್ದೇಶದಿಂದ ಈ ಮತದಾನದ ಅಭಿಯಾನ ಜಾರಿ ಮಾಡಲಾಗಿದೆ ಎಂದು ವೈನ್ ಸ್ಟೋರ್ ಮಾಲೀಕರು ಹೇಳಿದ್ದಾರೆ.ಜಿಲ್ಲಾಡಳಿತದ ಪ್ರಯತ್ನಕ್ಕೆ ಕೈ ಜೋಡಿಸಿರುವ ವೈನ್ ಸ್ಟೋರ್ ಮದ್ಯ ಪ್ರಿಯರ ಮತದಾನಕ್ಕೆ ಹೆಚ್ಚು ಒತ್ತು ನೀಡಿರುವುದು ಶ್ಲಾಘನೀಯ.