ನೈರುತ್ಯ ರೈಲ್ವೆ ವ್ಯವಸ್ಥಾಪಕ ಸಂಜೀವ ಕಿಶೋರ್ ಹುಬ್ಬಳ್ಳಿ:ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತುತಪಡಿಸಿರುವ ಕೇಂದ್ರ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಬಹುದೊಡ್ಡ ಕೊಡುಗೆ ದೊರೆತಿದೆ. ನೈಋತ್ಯ ರೈಲ್ವೆ ವಲಯಕ್ಕೂ ಪೂರಕವಾದ ಬಜೆಟ್ ಇದು ಎಂದು ನೈರುತ್ಯ ರೈಲ್ವೆ ವ್ಯವಸ್ಥಾಪಕ ಸಂಜೀವ ಕಿಶೋರ್ ಹೇಳಿದರು.
2023ರಲ್ಲಿ ರೈಲ್ವೆ ವಲಯಕ್ಕೆ 2.40 ಲಕ್ಷ ಕೋಟಿ: ರೈಲ್ವೆಗೆ 2.40 ಲಕ್ಷ ಕೋಟಿ ರೂ ಗಳ ಬಂಡವಾಳ ಒದಗಿಸಲಾಗಿದೆ. ಇದು 2013-14ರ ಹಣಕಾಸು ವರ್ಷದಲ್ಲಿ ಮಾಡಿದ ವೆಚ್ಚದ ಒಂಬತ್ತು ಪಟ್ಟು ಹೆಚ್ಚು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಕಲ್ಲಿದ್ದಲು, ರಸಗೊಬ್ಬರ ಮತ್ತು ಆಹಾರ ಧಾನ್ಯ ಕ್ಷೇತ್ರಗಳನ್ನು ಪರಸ್ಪರ ಸಾಗಣೆಗೆ 100 ನಿರ್ಣಾಯಕ ಸಾರಿಗೆ ಯೋಜನೆಗಳನ್ನು ಗುರುತಿಸಲಾಗಿದೆ. ಈ ಯೋಜನೆಗೆ ಸುಮಾರು 75,000 ಕೋಟಿ ಹೂಡಿಕೆ ಮಾಡಲಾಗುವುದು. ಅದರಲ್ಲಿ 15,000 ಕೋಟಿ ಖಾಸಗಿ ಮೂಲಗಳಿಂದ ಆದ್ಯತೆಯನುಸಾರ ಪಡೆದುಕೊಳ್ಳಲಾಗುವುದು ಎಂದು ಸಚಿವೆ ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತಕ್ಕಂತೆ ಬೋಗಿಗಳ ನವೀಕರಣ: ರೈಲ್ವೆ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ರಾಜಧಾನಿ, ಶತಾಬ್ದಿ, ಡುರೊಂಟೊ, ಹಮ್‌ಸಫರ್ ಮತ್ತು ತೇಜಸ್‌ನಂತಹ ಪ್ರೀಮಿಯರ್ ರೈಲುಗಳ 1,000ಕ್ಕೂ ಹೆಚ್ಚು ಬೋಗಿಗಳನ್ನು ನವೀಕರಿಸಲಾಗುತ್ತದೆ. ಈ ಬೋಗಿಗಳನ್ನು ಪ್ರಯಾಣಿಕರಿಗೆ ಅನುಕೂಲವಾಗುವಂತೆ ನಿರ್ಮಿಸಲಾಗುತ್ತದೆ. ರೈಲುಗಳ ವೇಗವನ್ನು ಹೆಚ್ಚಿಸಲು ಹಲವು ಕಡೆಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಾರಂಭಿಸಲು ರೈಲ್ವೆಯು ಯೋಜನೆ ರೂಪಿಸಿದೆ. ಇದಕ್ಕೆ ಪೂರಕವಾಗಿ ಹಳೆಯ ಹಳಿಗಳನ್ನು ಬದಲಾಯಿಸಲು ಬೇಕಾದ ಕ್ರಮ ಕೈಗೊಳ್ಳಲಾಗುತ್ತದೆ.
100 ವಿಸ್ಟಾಡೋಮ್ ಕೋಚ್: ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ರೈಲ್ವೆಯು ಇನ್ನೂ 100 ವಿಸ್ಟಾಡೋಮ್ ಕೋಚ್‌ಗಳನ್ನು ತಯಾರಿಸಲು ಮುಂದಾಗಿದೆ. ಬಜೆಟ್‌ನಲ್ಲಿ 35 ಹೈಡ್ರೋಜನ್ ಇಂಧನ ಆಧಾರಿತ ರೈಲುಗಳು, 4,500 ಹೊಸದಾಗಿ ವಿನ್ಯಾಸಗೊಳಿಸಲಾದ ಆಟೋಮೊಬೈಲ್ ಕ್ಯಾರಿಯರ್ ಕೋಚ್‌ಗಳು, 5000 ಎಲ್ಹೆಚ್ಬಿ ಕೋಚ್‌ಗಳು ಮತ್ತು 58000 ವ್ಯಾಗನ್‌ಗಳನ್ನು ತಯಾರಿಸಲು ಸರ್ಕಾರ ಪ್ರಸ್ತಾಪಿಸಿದೆ. 2023ರ ಕೇಂದ್ರ ಬಜೆಟ್‌ನಲ್ಲಿ ರೈಲ್ವೆಗೆ 1.4 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದ್ದು, ಅದರಲ್ಲಿ 1.37 ಲಕ್ಷ ಕೋಟಿ ಬಂಡವಾಳ ವೆಚ್ಚ ಮತ್ತು 3,267 ಲಕ್ಷ ಕೋಟಿ ಆದಾಯ ವೆಚ್ಚಕ್ಕೆ ಮೀಸಲಿಡಲಾಗಿದೆ ಎಂದು ವಿವರಣೆ ನೀಡಿದರು.
ಇದನ್ನೂಓದಿ:ನಿರ್ಮಲಾ ಸೀತಾರಾಮನ್ ಅವರಿಗೆ ಕೆಂಪು ಅದೃಷ್ಟದ ಬಣ್ಣವೇ?: ಬಜೆಟ್ ಜೊತೆಗೆ ಸೀರೆಯಿಂದಲೂ ಗಮನ ಸೆಳೆದ ವಿತ್ತ ಸಚಿವೆ