ಹುಬ್ಬಳ್ಳಿ: ಆತ ಇರುವ ಒಂದು ಎಕರೆ ಜಮೀನಿನಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕೆಂದಿದ್ದ ರೈತ. ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬಳಸಿಕೊಂಡು ಉಳಿಮೆ ಮಾಡುತ್ತಿದ್ದ ಅನ್ನದಾತ. ಈ ಅನ್ನದಾತನ ಕಷ್ಟಕ್ಕೆ ನೆರವಾಗಿದ್ದಾರೆ ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ.
ಎತ್ತುಗಳಿಲ್ಲದೇ ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಬಳಸಿ ಜಮೀನಿನಲ್ಲಿ ಕುಂಟೆ ಹೊಡೆಸಿದ್ದ ರೈತನಿಗೆ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ ಎತ್ತುಗಳನ್ನು ಕೊಡುಗೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಕಲ್ಲಪ್ಪ ಜಾವೂರ ಎಂಬುವರಿಗೆ ಎತ್ತುಗಳನ್ನು ಸಿದ್ದಾರೂಢ ಮಠದ ಆವರಣದಲ್ಲಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬಡ ರೈತನಿಗೆ ಎತ್ತುಗಳನ್ನು ಕೊಡುಗೆಯಾಗಿ ನೀಡಿದ ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ ಎತ್ತುಗಳು ಇಲ್ಲದ್ದಕ್ಕೆ ಕಲ್ಲಪ್ಪ ತನ್ನ ಇಬ್ಬರು ಹೆಣ್ಣು ಮಕ್ಕಳ ಹೆಗಲ ಮೇಲೆ ಕುಂಟೆ ಹೊರಿಸಿ ಜಮೀನು ಹದಗೊಳಿಸುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದು ನನ್ನ ಗಮನಕ್ಕೆ ಬಂದಿತು. ಕೃಷಿಕನಿಗೆ ಎತ್ತುಗಳನ್ನು ಕೊಡಿಸಬೇಕೆಂದು ನಿರ್ಧಾರ ಮಾಡಿ ಕಾರ್ಯಕರ್ತರ ಮೂಲಕ ಕಲ್ಲಪ್ಪನಿಗೆ ತಿಳಿಸಲಾಯಿತು. ಅದಕ್ಕೆ ಅವರ ಕುಟುಂಬದವರು ಸಹಮತ ವ್ಯಕ್ತಪಡಿಸಿದರು.
ಆ ಹಿನ್ನೆಲೆಯಲ್ಲಿ ಸಿದ್ದಾರೂಢರ ಸ್ವಾಮೀಜಿ ಮಠದ ಸನ್ನಿಧಾನದಲ್ಲಿ ಎತ್ತುಗಳನ್ನು ಕೊಡಬೇಕೆಂದು ಸಂಕಲ್ಪ ಮಾಡಿಕೊಳ್ಳಲಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕ ಎಸ್ ಆರ್ ಪಾಟೀಲ ಅವರ ಮೂಲಕ ರೈತನಿಗೆ ಎತ್ತುಗಳನ್ನ ಕೊಡುಗೆ ನೀಡಲಾಯಿತು ಎಂದಿದ್ದಾರೆ ಮಾಜಿ ಎಂಎಲ್‌ಸಿ ನಾಗರಾಜ್ ಛಬ್ಬಿ.
ಬಡತನದ ಬೇಗೆಯಲ್ಲಿ ಬೇಸತ್ತಿದ್ದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ, ಸದ್ಗುರು ಸಿದ್ದಾರೂಢರ ಸನ್ನಿಧಾನದಲ್ಲಿ ಜೋಡಿ ಎತ್ತುಗಳು ರೈತನ ಕೈಸೇರಿವೆ. ಮಡಕಿಹೊನ್ನಳಿ ಗ್ರಾಮದ ಜನರಲ್ಲಿ ಸಂತಸ ಮೂಡಿದೆ. ಅಲ್ಲದೇ ವಿಶೇಷವಾಗಿ ಪೂಜೆ ಸಲ್ಲಿಸಿ ಜೋಡಿ ಎತ್ತುಗಳನ್ನು ಸ್ವಾಗತಿಸಿಕೊಂಡರು. ಆಸರೆಯಿಲ್ಲದ ಕೃಷಿಕ ಕುಟುಂಬಕ್ಕೆ ಈಗ ಆನೆ ಬಲ ಬಂದಂತಾಗಿದೆ.