ಕರ್ನಾಟಕ

karnataka

By

Published : Jun 2, 2020, 7:55 PM IST

ETV Bharat / state

ಸಮಾಜದ ಕಟ್ಟಕಡೆಯ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗುವಂತೆ ಮಾಡಬೇಕು: ಸುರೇಶ್‍ ಕುಮಾರ್

ಸ್ಥಗಿತಗೊಂಡಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಜೂ. 25 ರಿಂದ ಪ್ರಾರಂಭವಾಗಲಿರುವ ಪರೀಕ್ಷೆಯಲ್ಲಿ ಸಮಾಜದ ಕಟ್ಟಕಡೆಯ ವಿದ್ಯಾರ್ಥಿ ಹಾಜರಾಗುವಂತೆ ಆತ್ಮವಿಶ್ವಾಸ ಬೆಳೆಸುವ ಕಾರ್ಯವನ್ನು ಈಗಿನಿಂದಲೇ ನಡೆಯಬೇಕು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‍ ಕುಮಾರ್ ಸೂಚಿಸಿದರು.

Primary and Secondary Education Minister Suresh Kumar
ಎಸ್​ಎಸ್​ಎಲ್​ಸಿ ಪರೀಕ್ಷಾ ಸಿದ್ಧತೆ ಪರಿಶೀಲನೆ ಸಭೆಯಲ್ಲಿ ಸಚಿವ ಸುರೇಶ್​ ಕುಮಾರ್

ಧಾರವಾಡ:ಕೊರೊನಾದಿಂದ ಮುಂದೂಡಲ್ಪಟ್ಟಿದ್ದ ಎಸ್​ಎಸ್​ಎಲ್​ಸಿ ಪರೀಕ್ಷೆಗಳು ಬರುವ ಜೂ. 25 ರಿಂದ ಪ್ರಾರಂಭವಾಗಲಿವೆ. ಸಮಾಜದ ಕಟ್ಟಕಡೆಯ ವಿದ್ಯಾರ್ಥಿಯೂ ಪರೀಕ್ಷೆಗೆ ಹಾಜರಾಗುವಂತೆ ಆತ್ಮವಿಶ್ವಾಸ ಮೂಡಿಸಿ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪರೀಕ್ಷೆಯ ಪಾವಿತ್ರ್ಯತೆ ಮತ್ತು ಗಾಂಭಿರ್ಯತೆಗೆ ಧಕ್ಕೆಯಾಗದ ರೀತಿಯಲ್ಲಿ ಪರೀಕ್ಷೆಗಳನ್ನು ಆಯೋಜಿಸಬೇಕು ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‍ಕುಮಾರ್ ಹೇಳಿದರು.

ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳ ಎಸ್​ಎಸ್​ಎಲ್​ಸಿ ಪರೀಕ್ಷಾ ಸಿದ್ಧತೆ ಪರಿಶೀಲನೆ ಸಭೆ ನಡೆಸಿ ಮಾತನಾಡಿದರು.

ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಶಿಕ್ಷಣ ಸಚಿವರು

ಪರೀಕ್ಷೆಗಳು ಯಾವುದೇ ಕಾರಣಕ್ಕೂ ರದ್ದಾಗಬಾರದು ಎಂಬ ಆಶಯವನ್ನು ಮಕ್ಕಳು ಹಾಗೂ ಬಹುತೇಕ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. ವರ್ಷವಿಡೀ ಓದಿದ ಮಕ್ಕಳು ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಲು ಕಾತರರಾಗಿದ್ದಾರೆ. ಸರ್ಕಾರವು ಸಾಮಾಜಿಕ ಅಂತರ ಹಾಗೂ ಸುರಕ್ಷತೆ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಪರೀಕ್ಷೆಗಳನ್ನು ಆಯೋಜಿಸಲು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿದೆ.

ಈ ಸೂತ್ರಗಳನ್ನು ಹೈಕೋರ್ಟ್ ಕೂಡಾ ಮೆಚ್ಚಿಕೊಂಡಿದೆ. ಘನ ಉಚ್ಛನ್ಯಾಯಾಲಯವು ಪರೀಕ್ಷೆ ಬರೆಯುವ ಎಲ್ಲ ಮಕ್ಕಳಿಗೂ ಸಾರಿಗೆ ಸೌಕರ್ಯ ಕಲ್ಪಿಸಲು ಸ್ಪಷ್ಟ ನಿರ್ದೇಶನ ನೀಡಿದೆ. ರಾಜ್ಯಸಾರಿಗೆ ಸಂಸ್ಥೆಯೊಂದಿಗೆ ಈ ನಿಟ್ಟಿನಲ್ಲಿ ಚರ್ಚಿಸಿದ್ದು, ಸೂಕ್ತ ದರದಲ್ಲಿ ಬಸ್​ಗಳನ್ನು ಒದಗಿಸಲು ಸಂಸ್ಥೆ ಸಿದ್ಧ ಇದೆ. ಖಾಸಗಿ ಶಾಲಾ ವಾಹನಗಳನ್ನು ಕೂಡಾ ಬಳಸಿಕೊಳ್ಳಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಮಕ್ಕಳನ್ನು ಕರೆತರುವ ಮಾರ್ಗದ ನಕ್ಷೆ ಸಿದ್ಧಪಡಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿ ಪರೀಕ್ಷೆ ಬರೆಯಲು ಪ್ರೋತ್ಸಾಹಿಸಬೇಕು ಎಂದರು.

ರಾಜ್ಯದಲ್ಲಿ ಕೊರೊನಾ ನಿರೀಕ್ಷಿತ ಪ್ರಮಾಣದಲ್ಲಿ ಭಯಾನಕವಾಗಿಲ್ಲ. ಜನತೆ, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಜೂ. 2020 ರ ಎಸ್​ಎಸ್​ಎಲ್​ಸಿ ಪರೀಕ್ಷೆಗಳನ್ನು ಸವಾಲಾಗಿ ಸ್ವೀಕರಿಸಿ ಅಚ್ಚುಕಟ್ಟಾಗಿ ನಿರ್ವಹಿಸುವ ಮೂಲಕ ತನ್ನ ಸಾಮರ್ಥ್ಯ ಮತ್ತು ಕ್ಷಮತೆಯನ್ನು ಸಾಬೀತುಪಡಿಸಬೇಕು ಎಂದರು.

ಎಲ್ಲಾ ಜಿಲ್ಲೆಗಳಲ್ಲಿ ಮಾದರಿ ಪರೀಕ್ಷಾ ಕೊಠಡಿಗಳನ್ನು ಸಿದ್ಧಪಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ ಅಲ್ಲಿನ ವಿಧಾನಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು. ವಿದ್ಯಾರ್ಥಿಗಳು ಮನೆಗಳಲ್ಲಿಯೇ ಮಾಸ್ಕ್ ಧರಿಸಿ ಪರೀಕ್ಷೆ ಬರೆಯುವ ಹವ್ಯಾಸ ರೂಢಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿರುತ್ತದೆ. ಸಿಬ್ಬಂದಿ ಕೈಗವಸುಗಳನ್ನು ಧರಿಸಿ ಕಾರ್ಯನಿರ್ವಹಿಸಬೇಕು. ಕೆಮ್ಮು, ನೆಗಡಿ, ಜ್ವರದ ಲಕ್ಷಣಗಳಿರುವ ವಿದ್ಯಾರ್ಥಿಗಳು ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಆಸನ ವ್ಯವಸ್ಥೆ ಗುರುತಿಸಿರಬೇಕು.

ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ಎಸ್​ಎಸ್​ಎಲ್​ಸಿ ಪರೀಕ್ಷಾ ಸಿದ್ಧತೆ ಸರಣಿ, ಮಕ್ಕಳ ವಾಣಿ ಯೂಟ್ಯೂಬ್ ಚಾನಲ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ನಿರ್ವಹಿಸುತ್ತಿರುವ ಆನ್​ಲೈನ್​ ಪಾಠಗಳು ಹಾಗೂ ಸಹಾಯವಾಣಿ ಮೂಲಕ ನಡೆಯುತ್ತಿರುವ ಸಲಹೆಗಳನ್ನು ಇನ್ನಷ್ಟು ಚುರುಕುಗೊಳಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ನೇರವಾಗಿ ಸಂಪರ್ಕಿಸಿ ಪರೀಕ್ಷೆ ಕುರಿತು ಮಾಹಿತಿ ನೀಡಿ, ಪರೀಕ್ಷಾ ಕೇಂದ್ರ, ಸಾರಿಗೆ ಸೌಕರ್ಯದ ಅಗತ್ಯತೆ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಶಿಕ್ಷಣ ಸಚಿವರು

ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ಧಾರವಾಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ: ಬಿ.ಸಿ. ಸತೀಶ್, ಗದಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಆನಂದ ಕೆ. ಹಾವೇರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಮೇಶ ದೇಸಾಯಿ ಮಾತನಾಡಿ, ಅವರವರ ಜಿಲ್ಲೆಯ‌ ಮಾಹಿತಿ‌ ನೀಡಿದರು. ಶಾಸಕ ಅಮೃತ್​​​ ದೇಸಾಯಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕ ಮೋಹನ ಹಂಚಾಟೆ, ಗದಗ ಉಪನಿರ್ದೇಶಕ ಎನ್.ಹೆಚ್​. ನಾಗೂರ, ಹಾವೇರಿ ಉಪನಿರ್ದೇಶಕ ಎ.ಎನ್. ವಡಗೇರಿ ಸೇರಿದಂತೆ ಮೂರು ಜಿಲ್ಲೆಗಳ ಡಯಟ್ ಪ್ರಾಚಾರ್ಯರು ಸೇರಿದಂತೆ ಅಧಿಕಾರಿಗಳಿದ್ದರು.

ABOUT THE AUTHOR

...view details