ಕರ್ನಾಟಕ

karnataka

ETV Bharat / state

ಬಜೆಟ್​ಗೆ ಸೀಮಿತವಾದ ಕಳಸಾ‌ ಬಂಡೂರಿ, ಮಹದಾಯಿ ಯೋಜನೆ: ಹೋರಾಟಗಾರರ ಆಕ್ರೋಶ - ಮಹದಾಯಿ ನ್ಯಾಯಾಧಿಕರಣ

ಆಳುವ ಸರ್ಕಾರಗಳು ಉತ್ತರ ಕರ್ನಾಟಕದ ಕಳಸಾ‌ ಬಂಡೂರಿ ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕೆ ನಿರ್ಲಕ್ಷ್ಯವಹಿಸಿವೆ. ಈ ಯೋಜನೆಯನ್ನು ಬಜೆಟ್​ಗೆ ಸೀಮಿತಗೊಳಿಸಲಾಗಿದೆ ಎಂಬುದು ಕಳಸಾ‌ ಬಂಡೂರಿ ಹೋರಾಟಗಾರರ ಆರೋಪವಾಗಿದೆ.

Mahadayi Scheme
ಬಜೆಟ್​ಗೆ ಸೀಮಿತವಾದ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಬೇಕಿದೆ ಇಚ್ಚಾಶಕ್ತಿ...

By

Published : Jul 13, 2023, 6:17 PM IST

Updated : Jul 13, 2023, 9:39 PM IST

ಕಳಸಾ ಬಂಡೂರಿ ಹೋರಾಟಗಾರ ವೀರೇಶ ಸೋಬರದಮಠ ಮಾತನಾಡಿದರು.

ಹುಬ್ಬಳ್ಳಿ:ಕಳಸಾ‌ ಬಂಡೂರಿ ಹಾಗೂ ಮಹದಾಯಿ ಯೋಜನೆಯು ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಆಳುವ ಸರ್ಕಾರಗಳು ಈ ಯೋಜನೆ ಅನುಷ್ಠಾನಕ್ಕೆ ತೀವ್ರ ಹಿಂದೇಟು ಹಾಕುತ್ತಿವೆ. ಅಧಿಕಾರಕ್ಕೆ ಬರುವ ಮುಂಚೆ ಹಾಗೂ ಬಂದ ಕೆಲವು ದಿನಗಳ ಕಾಲ ಸಾಕಷ್ಟು ಒತ್ತು ನೀಡುವ ಸರ್ಕಾರಗಳು, ನಂತರ ಈ ವಿಷಯವನ್ನು ಮೂಲೆಗುಂಪು ಮಾಡುತ್ತವೆ ಎಂಬ ಆಕ್ರೋಶ ವ್ಯಕ್ತವಾಗಿದೆ.

ಮಹದಾಯಿ ಯೋಜನೆ ಅನುಷ್ಠಾನ ಹೋರಾಟ ಸುಮಾರು ಐದು ದಶಕದ್ದು. ಈ ವಿಚಾರದಲ್ಲಿ ರೈತರ ಕಣ್ಣೀರೊರೆಸುವ ಪ್ರಾಮಾಣಿಕ ಪ್ರಯತ್ನ ಮಾತ್ರ ಯಾವ ಸರ್ಕಾರದಿಂದಲೂ ಆಗಿಲ್ಲ. ಇತ್ತೀಚಿನ ಬಜೆಟ್‌ಗಳಲ್ಲಂತೂ ಮಹದಾಯಿ ಹೆಸರು ಚಾಚೂ ತಪ್ಪದೇ ದಾಖಲಾಗುತ್ತಿದೆ. ಆದರೆ, ಬಳಿಕ ಈ ಯೋಜನೆಯ ಕಾರ್ಯಾನುಷ್ಠಾನ ಮಾತ್ರ ಶೂನ್ಯ. ರೈತರ ಛಾಟಿ ಏಟಿನಿಂದ ತಪ್ಪಿಸಿಕೊಳ್ಳಬೇಕು ಎನ್ನುವ ಇರಾದೆಯಿಂದ ಪ್ರತಿ ವರ್ಷದ ಬಜೆಟ್‌ನಲ್ಲಿ ಮಹದಾಯಿ ಯೋಜನೆ ಸೇರಿಸಲಾಗುತ್ತಿದೆ. ಈ ಯೋಜನೆ ಅನುಷ್ಠಾನಕ್ಕೆ ಸಾವಿರಾರು ಕೋಟಿ ರೂಪಾಯಿ ಮೀಸಲಿಡಲಾಗಿದೆ. ರೈತರಲ್ಲಿ ಭರವಸೆ ಮೂಡಿಸಲಾಗುತ್ತಿದೆ. ಬಳಿಕ ಸರ್ಕಾರಗಳು ಯೋಜನೆ ಜಾರಿಗೊಳಿಸಲು ಹಿಂದೇಟು ಹಾಕುತ್ತವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಮೂಗಿಗೆ ತುಪ್ಪ ಒರೆಸುವ ಕಾರ್ಯ:ಪ್ರಸಕ್ತ ಬಜೆಟ್‌ನಲ್ಲಿಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮಹದಾಯಿ ವಿಚಾರ ಪ್ರಸ್ತಾಪಿಸಿದ್ದಾರೆ. ಮಹದಾಯಿ ನ್ಯಾಯಾಧಿಕರಣದಿಂದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ ಹಂಚಿಕೆಯಾದ 3.90 ಟಿಎಂಸಿ ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದೆ. ಅವಶ್ಯವಿರುವ ಅರಣ್ಯ ತೀರುವಳಿ ಪಡೆದು ಕಾಮಗಾರಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎನ್ನುವ ಒಂದು ಸಾಲು ಸೇರಿಸಲಾಗಿದೆ. ಅನುಮತಿ ಸಿಗುವ ವಿಶ್ವಾಸದ ಬಗ್ಗೆಯಾಗಲಿ, ಅನುಮತಿ ಸಿಕ್ಕಿದ್ದೇ ಆದಲ್ಲಿ ಕಾಮಗಾರಿ ಆರಂಭಿಸಲು ಎಷ್ಟು ಅನುದಾನ ನೀಡಲಾಗುವುದು ಎನ್ನುವ ಒಂದಂಶವನ್ನೂ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿಲ್ಲ. ಈ ಬಾರಿಯೂ ಸಹ ಸರ್ಕಾರವು ರೈತರ ಮೂಗಿಗೆ ತುಪ್ಪ ಒರೆಸುವ ಕಾರ್ಯ ಮಾಡುತ್ತಿದೆ ಎಂದೆನಿಸುತ್ತಿದೆ ಎಂದು ರೈತರು ಆರೋಪಿಸಿದ್ದಾರೆ.

ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಗೆ ಅನುಮೋದನೆ ಪಡೆಯಲು ರಾಷ್ಟ್ರೀಯ ವನ್ಯಜೀವಿ ಮಂಡಳಿಗೆ ಕರ್ನಾಟಕ ಸರ್ಕಾರ 2022 ಡಿಸೆಂಬರ್‌ನಲ್ಲಿ ಪ್ರಸ್ತಾವನೆ ಸಲ್ಲಿಸಿದೆ. ಯೋಜನೆ ಅನುಷ್ಠಾನಕ್ಕೆ ಅಗತ್ಯವಾಗಿ ಬೇಕಾಗಿರುವ 26.96 ಹೆಕ್ಟೇರ್ ಅರಣ್ಯ ಬಳಕೆಗೆ ಒಪ್ಪಿಗೆ ಪಡೆಯಲು ಕೇಂದ್ರ ಪರಿಸರ, ಅರಣ್ಯ ಹಾಗೂ ತಾಪಮಾನ ಬದಲಾವಣೆ ಸಚಿವಾಲಯಕ್ಕೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಿದೆ. ಪರಿಸರ ನಿರ್ವಹಣಾ ಯೋಜನೆ ಪ್ರಕಾರ, ಪರಿಸರ ಸಂರಕ್ಷಣಾ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಹೇಳಿದೆ. ಪರಿಹಾರಾತ್ಮಕ ಅರಣ್ಯ ಬೆಳೆಸುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾರ್ಗಸೂಚಿ ಪ್ರಕಾರ ಮುನ್ನಡೆಯಲು ಅರಣ್ಯ ಇಲಾಖೆ ತಾಂತ್ರಿಕ ಮಾರ್ಗದರ್ಶನ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ರಾಜಕೀಯ ಅಸ್ತ್ರವಾದ ಕಳಸಾ-ಬಂಡೂರಿ, ಮಹದಾಯಿ:ಯೋಜನೆ ಜಾರಿಗೆ ಕೋಟಿ ಕೋಟಿ ಅನುದಾನ ಮೀಸಲಿಡಲಾಗುತ್ತಿದೆ. ಆದ್ರೆ ಮಹದಾಯಿ ಕಾಮಗಾರಿ ಆರಂಭ ಮಾಡಲು ಅರಣ್ಯ ಇಲಾಖೆಯಿಂದ ಅನುಮತಿ ಸಿಗಬೇಕಿದೆ. ಅನುಮತಿ ಸಿಗದೇ ಟೆಂಡರ್ ಕರೆದ ಬಗ್ಗೆ ಬಸವರಾಜ ಬೊಮ್ಮಾಯಿ ಸರ್ಕಾರ ಉತ್ತರ ಕರ್ನಾಟಕದ ಜನರಿಗೆ ತಿಳಿಸಿತ್ತು. ಅಲ್ಲದೇ, ಡಿಸೆಂಬರ್ 29, 2022ರಂದು ಕೇಂದ್ರ ಜಲ ಆಯೋಗ ಡಿಪಿಆರ್‌ಗೆ ಅನುಮೋದನೆ ನೀಡಿತ್ತು.

ಅನುಮೋದನೆ ನೀಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಕುಣಿದು ಕುಪ್ಪಳಿಸಿದ್ದರು. ಅರಣ್ಯ ಇಲಾಖೆಯಿಂದ ಅನುಮತಿ ಸಿಗುವ ಮುನ್ನವೇ ಉತ್ತರ ಕರ್ನಾಟಕದ ತುಂಬೆಲ್ಲ ಬ್ಯಾನರ್ ಅಳವಡಿಸಿ ವಿಜಯೋತ್ಸವ ಮಾಡಿದ್ದರು. ಆದ್ರೆ ಇಲ್ಲಿಯವರೆಗೂ ಕಾಮಗಾರಿ ಆರಂಭ ಮಾಡಿಲ್ಲ. ಸಿದ್ದರಾಮಯ್ಯನವರ ಸರ್ಕಾರ ಮಹದಾಯಿ ನ್ಯಾಯಾಧೀಕರಣದಿಂದ ಕಳಸಾ ಮತ್ತು ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆಗೆ 3.90 ಟಿಎಂಸಿ‌ ನೀರು ಹಂಚಿಕೆಯಾಗಿದೆ. ನೀರಿನ ಬಳಕೆಗಾಗಿ ಈಗಾಗಲೇ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಅವಶ್ಯಕವಿರುವ ಅರಣ್ಯ ತೀರುವಳಿ ಪಡೆದು, ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಯತ್ನಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಲಾಗಿದೆ. ಇದರಿಂದಾಗಿ ಕೇವಲ ಬಜೆಟ್‌ಗೆ ಮಾತ್ರ ಮಹದಾಯಿ ಯೋಜನೆ ಮೀಸಲಾಗಿದೆ ಎಂದು ಕಳಸಾ ಬಂಡೂರಿ ಹೋರಾಟಗಾರ ವೀರೇಶ ಸೋಬರದಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನಾಗವಾರ ಭೂ ಸ್ವಾದೀನ ಅಕ್ರಮ ಪ್ರಕರಣದ ತನಿಖೆ ನಡೆಸುತ್ತೇವೆ: ಡಿ ಕೆ ಶಿವಕುಮಾರ್

Last Updated : Jul 13, 2023, 9:39 PM IST

ABOUT THE AUTHOR

...view details