ಹುಬ್ಬಳ್ಳಿ: ಭಾರತದ ಪ್ರತಿಷ್ಠಿತ ಸಂಸ್ಥೆಯಾದ SKOCH ಸಂಸ್ಥೆಯಿಂದ ಸುಸ್ಥಿರ ಮತ್ತು ಪರಿಸರ (Environment & Sustainability) ವರ್ಗದಡಿ ಕೊಡ ಮಾಡುವ 2020ರ ಸಾಲಿನ ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಯೋಜನೆಯು ಭಾಜನವಾಗಿದೆ.
ರಾಷ್ಟ್ರ ಮಟ್ಟದ ಸ್ವರ್ಣ ಪ್ರಶಸ್ತಿಗೆ ಆಯ್ಕೆಯಾದ ಬಿಆರ್‌ಟಿಎಸ್ ಚಿಗರಿ!
ಒಂದೇ ವರ್ಷದಲ್ಲಿ ಹಲವು ಮೆಟ್ರೋ ಸಾರಿಗೆಗಿಂತ ಹೆಚ್ಚಿನ ಪ್ರಯಾಣಿಕರ ಬೇಡಿಕೆ ಪೂರೈಸಲು ಯಶಸ್ವಿಯಾಗಿರುವುದು ಮತ್ತು ನಗರಗಳಲ್ಲಿ ಸುಸ್ಥಿರ ಸಮೂಹ ಮತ್ತು ನಗರ ಸಾರಿಗೆ ವ್ಯವಸ್ಥೆ ನೀಡಿರುವ ಹಿನ್ನೆಲೆ ರಾಷ್ಟ್ರ ಮಟ್ಟದ ಸ್ವರ್ಣ ಪ್ರಶಸ್ತಿಗೆ ಬಿಆರ್‌ಟಿಎಸ್ ಚಿಗರಿ ಆಯ್ಕೆಯಾಗಿದೆ..
ಕಳೆದ 2 ತಿಂಗಳಿನಿಂದ ನಡೆದ ರಾಷ್ಟ್ರಮಟ್ಟದ 3 ಹಂತದ ಆಯ್ಕೆ ಪ್ರಕ್ರಿಯೆಯಲ್ಲಿ ಹೆಚ್ಡಿಬಿಆರ್ಟಿಎಸ್ ವಿವಿಧ ರಾಜ್ಯಗಳಿಂದ ಸ್ವೀಕೃತವಾದ 14 ಉತ್ತಮ ಯೋಜನೆಗಳ ಪೈಕಿ ಹೆಚ್ಡಿಬಿಆರ್ಟಿಎಸ್ ಅತ್ಯುತ್ತಮ ಯೋಜನೆ ಎಂದು ಆಯ್ಕೆಯಾಗಿದೆ. ಇದಕ್ಕಾಗಿ ನೀಡುವ ಸ್ವರ್ಣ ಪ್ರಶಸ್ತಿಯನ್ನು ಆನ್‍ಲೈನ್ ಮೂಲಕ ಪ್ರದಾನ ಮಾಡಲಾಯಿತು.
ಆಯ್ಕೆಯ ಸಂದರ್ಭದಲ್ಲಿ ಬಿಆರ್‌ಟಿಎಸ್ ಯೋಜನೆಯಡಿ ಅನುಷ್ಠಾನಗೊಳಿಸಲಾದ ವಿಭಿನ್ನ ಸೌಲಭ್ಯಗಳು, ಕಡಿಮೆ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಆದ ಹೆಚ್ಚಳ ಮತ್ತು ಮೆಚ್ಚುಗೆ,ಅತ್ಯಂತ ಕಡಿಮೆ ದರದಲ್ಲಿ ದೇಶದಲ್ಲಿ ಅತಿ ಹೆಚ್ಚಿನ ಗುಣಮಟ್ಟದ ಎಸಿ ಬಸ್ ಸಂಚಾರ ಸೌಲಭ್ಯ ಕಲ್ಪಿಸುತ್ತಿರುವುದು, ವಾಯು ಮಾಲಿನ್ಯದ ನಿಯಂತ್ರಣ ಸೇರಿ ವಿವಿಧ ಆಯಾಮಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.