ಹುಬ್ಬಳ್ಳಿ:ರಜೆಗೆಂದು ಅಜ್ಜಿ ಮನೆಗೆ ಬಂದಿದ್ದ ಬಾಲಕನೋರ್ವ ತನ್ನ ಮನೆಯ ಕೂಗಳತೆಯ ಮುಳ್ಳು ಕಂಠಿಯಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ಮಿಲತ್ ನಗರದ ದೊಡ್ಡಮನಿ ಮೈದಾನದಲ್ಲಿ ನಡೆದಿದೆ. 8 ವರ್ಷದ ಬಾಲಕ ಶವವಾಗಿ ಪತ್ತೆಯಾಗಿದ್ದಾನೆ. ದುಷ್ಕರ್ಮಿಗಳು ಬಾಲಕನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಇದರ ಹಿಂದೆ ಸಾಕಷ್ಟು ಅನುಮಾನ ವ್ಯಕ್ತವಾಗಿದೆ.
ಮೃತ ಬಾಲಕ ನದೀಂ ಭೈರಿದೇವರಕೊಪ್ಪದ ನಿವಾಸಿಯಾಗಿದ್ದು, ಬೇಸಿಗೆ ರಜೆಕ್ಕೆಂದು ತನ್ನ ಅಜ್ಜಿಯ ಮನೆ ಇರುವ ದೊಡ್ಡಮನಿ ಮೈದಾನ ಪ್ರದೇಶಕ್ಕೆ ಬಂದಿದ್ದ. ದೊಡ್ಡಮನಿ ಮೈದಾನದಲ್ಲಿ ನದೀಂ ತಾತ ವಾಚ್ಮನ್ ಆಗಿದ್ದು, ಹಲವಾರು ದಿನಗಳಿಂದಲೂ ಇಲ್ಲಿಯೇ ವಾಸವಿದ್ದಾರೆ. ನಿನ್ನೆ ಮಧ್ಯಾಹ್ನದ ಹೊತ್ತಿಗೆ ಆಟವಾಡಲು ಮನೆಯಿಂದ ಆಚೆ ಹೋಗಿದ್ದ ಬಾಲಕ ಬಳಿಕ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಬಾಲಕನ ಅಜ್ಜಿ ತಾತ ಎಲ್ಲ ಕಡೆ ಹುಡುಕಾಡಿದ್ದಾರೆ. ಆದರೆ ಬಾಲಕನ ಬಗ್ಗೆ ಸುಳಿವು ಸಿಕ್ಕಿರಲಿಲ್ಲ. ಹೀಗಾಗಿ ಆತಂಕಗೊಂಡ ಕುಟುಂಬಸ್ಥರು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರ ನೀಡಲು ಹೋಗಿದ್ದರು.
ಇನ್ನೂ ಇಂದು ಮೈದಾನದಲ್ಲಿ ಬಹಿರ್ದೆಸೆಗೆ ಹೋದ ಸಾರ್ವಜನಿಕರು ಶವವನ್ನು ನೋಡಿ ಪೊಲೀಸರಿಗೆ ಮತ್ತು ಮನೆಯವರಿಗೆ ತಿಳಿಸಿದ್ದಾರೆ. ಇಂದು ಮಧ್ಯಾಹ್ನದ ಸುಮಾರಿಗೆ ಬಾಲಕನ ಅಜ್ಜಿ ಮನೆಯ ಕೂಗಳತೆಯಲ್ಲಿನ ಮುಳ್ಳು ಕಂಠಿಯಲ್ಲಿ ಶವ ಪತ್ತೆಯಾಗಿದೆ. ಬಾಲಕನ ಮೃತ ದೇಹದ ಮೇಲೆ ಕೆಲ ಗಾಯಗಳಾಗಿವೆ. ಬಾಲಕನ ಶವ ಅರೆಬೆತ್ತಲೆಯಾಗಿ ಪತ್ತೆಯಾಗಿದೆ. ಬಾಲಕನನ್ನು ಸಲಿಂಗಕಾಮಕ್ಕೆ ಬಳಸಿಕೊಂಡು ದುಷ್ಕರ್ಮಿಗಳು ಬಳಿಕ ಹತ್ಯೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.