ಧಾರವಾಡ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಗಡಿ ವಿವಾದ ಮುಗಿದು ಹೋದ ಅಧ್ಯಾಯ ಎರಡೂ ರಾಜ್ಯದ ನಾಯಕರು ಪ್ರಚೋದಿಸುವ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಬಿಜೆಪಿ ನಾಯಕರಿಗೂ ಹೇಳುತ್ತೇವೆ ಪ್ರಚೋದನಾತ್ಮಕ ಹೇಳಿಕೆಯಿಂದ ಏನೂ ಆಗುವುದಿಲ್ಲ. ಕನ್ನಡ - ಮರಾಠಿಗರು ನೆಮ್ಮದಿಯಿಂದ ಇದ್ದಾರೆ. ನಮ್ಮ ರಾಜ್ಯದಲ್ಲಿಯೂ ಮರಾಠಿಗರು ನೆಮ್ಮದಿಯಿಂದ ಇದ್ದಾರೆ. ಮಹಾರಾಷ್ಟ್ರದ ಕನ್ನಡಿಗರೂ ನೆಮ್ಮದಿಯಿಂದ ಇದ್ದಾರೆ. ನಾವು - ಚೀನಾ ಪಾಕಿಸ್ತಾನ ಜೊತೆ ಬಡಿದಾಡಬೇಕು. ಅದು ಬಿಟ್ಟು ಕರ್ನಾಟಕ - ಮಹಾರಾಷ್ಟ್ರ ಎಂದು ಬಡಿದಾಡುವುದು ಅತ್ಯಂತ ದೌರ್ಭಾಗ್ಯದ ಸಂಗತಿ ಎಂದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಧಾನಿ ಮಧ್ಯಪ್ರವೇಶಿಸಬೇಕೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ವಿವಾದ ಸುಪ್ರೀಂಕೋರ್ಟ್‌ನಲ್ಲಿದೆ. ಮಹಾರಾಷ್ಟ್ರ ಸುಪ್ರೀಂಕೋರ್ಟ್‌ಗೆ ಹೋಗಬಾರದಿತ್ತು. ಯಾರ ಮಧ್ಯ ಪ್ರವೇಶದ ಅಗತ್ಯ ಇಲ್ಲ. ವಿವಾದ ಈಗ ಸುಪ್ರೀಂಕೋರ್ಟ್‌ನಲ್ಲಿದೆ. ಸುಪ್ರೀಂಕೋರ್ಟ್ ಕೋರ್ಟ್‌ನಲ್ಲಿ ನಮಗೆ ನ್ಯಾಯ ಸಿಗುತ್ತದೆ. ಕರ್ನಾಟಕದ ಒಂದಿಂಚು ಭೂಮಿ ಕೂಡ ಮಹಾರಾಷ್ಟ್ರಕ್ಕೆ ಹೋಗುವುದಿಲ್ಲ. ಮಹಾರಾಷ್ಟ್ರದ ಒಂದಿಂಚು ಭೂಮಿ ನಮಗೆ ಬರೋದಿಲ್ಲ. ಇದು ಈಗಾಗಲೇ ಮುಗಿದ ಅಧ್ಯಾಯ. ಮಹಾರಾಷ್ಟ್ರದವರೇ ಮೊದಲು ಹೇಳಿಕೆ ಕೊಟ್ಟಿದ್ದು. ಅನಗತ್ಯ ಹೇಳಿಕೆಗಳು ಬೇಡ, ಮಹಾರಾಷ್ಟ್ರದ ಎಲ್ಲ ಪಕ್ಷದ ನಾಯಕರಲ್ಲಿ ನಾನು ಆಗ್ರಹ ಮಾಡುತ್ತೇನೆ ಎಂದರು.
ಸಿದ್ದರಾಮಯ್ಯ ಬಗ್ಗೆ ಸಿ.ಟಿ. ರವಿ ಹೇಳಿಕೆಯನ್ನು ಕೇಂದ್ರ ಸಚಿವ ಜೋಶಿ ಸಮರ್ಥಿಸಿಕೊಂಡರು. ಸಿ.ಟಿ. ರವಿ ಮನೆಗೆ ಕಾಂಗ್ರೆಸ್ನವರು ಮುತ್ತಿಗೆ ಹಾಕುತ್ತಾರಂತೆ. ಕಾಂಗ್ರೆಸ್‌ನವರಿಗೂ ಮನೆಗಳಿವೆ, ಅವರ ಮನೆಗಳಿಗೆ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಬಹುದು. ಆದರೆ ಆ ಸಂಸ್ಕೃತಿ ನಮ್ಮದಲ್ಲ. ಹೀಗಾಗಿ ಸಿದ್ದರಾಮಯ್ಯ ಹಾಗೂ ಅವರ ಪಟಾಲಂ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಎಂದು ನಯವಾದ ಎಚ್ಚರಿಕೆಯನ್ನೂ ಜೋಶಿ ಕೊಟ್ಟರು.
ಇದನ್ನೂ ಓದಿ:ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದದ ಸಾಧಕ-ಬಾಧಕಗಳ ಚರ್ಚೆ ನಡೆಸುತ್ತೇನೆ: ಬೊಮ್ಮಾಯಿ