ಹುಬ್ಬಳ್ಳಿ:ಜಿಲ್ಲೆಯಹಾನಗಲ್ ತಾಲೂಕಿನ ಖಾಸಗಿ ಹೋಟೆಲ್ನಲ್ಲಿ ಇತ್ತೀಚಿಗೆ ಜೋಡಿಯೊಂದರ ಮೇಲೆ ನಡೆದ ಅಮಾನವೀಯ ಹಲ್ಲೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವರ್ಗಾಯಿಸುವಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ತಮ್ಮ ನಿವಾಸದ ಬಳಿ ಇಂದು ಮಾತನಾಡಿದ ಅವರು, ಈ ಪ್ರಕರಣವನ್ನು ಸ್ಥಳೀಯ ಪೊಲೀಸರು ಮುಚ್ಚಿಹಾಕಲು ಯತ್ನಿಸಿದ ಪ್ರಯತ್ನ ವಿಫಲವಾಗಿದೆ. ಪೊಲೀಸರು ಸಂತ್ರಸ್ತರಿಗೆ ದುಡ್ಡು ಕೊಟ್ಟು, ಆಮಿಷ ತೋರಿಸಿ ದೂರು ಹಿಂಪಡೆಯಿರಿ ಎಂದು ಒತ್ತಡ ಹೇರಿರುವುದು ಬಹಿರಂಗವಾಗಿದೆ. ಹೀಗಾಗಿ ನಾನು ತನಿಖೆಯನ್ನು ಸ್ಥಳೀಯ ಪೊಲೀಸರು ನಡೆಸುವುದು ಬೇಡ, ಎಸ್ಐಟಿಯಿಂದ ತನಿಖೆ ಮಾಡಿಸುವಂತೆ ಒತ್ತಾಯಿಸುತ್ತಿದ್ದೇನೆ ಎಂದರು.
ಹೀಗಾಗಿ, ಸಿಎಂ ಹಾವೇರಿಗೆ ಬಂದಾಗ ಪ್ರಕರಣದ ತನಿಖೆಯನ್ನು ಎಸ್ಐಟಿಯಿಂದ ನಡೆಸುವ ಘೋಷಣೆ ಮಾಡುವ ಭರವಸೆ ಇಟ್ಟುಕೊಂಡಿದ್ದೇನೆ. ಸಂತ್ರಸ್ತರನ್ನು ಬಿಜೆಪಿ ಭೇಟಿ ಮಾಡುತ್ತದೆ ಎಂದು ಅವರನ್ನು ಪೊಲೀಸರು ತನಿಖೆಯ ನೆಪದಲ್ಲಿ ಹಾನಗಲ್ದಿಂದ ಶಿರಸಿಗೆ ಸ್ಥಳಾಂತರಿಸಿದ್ದಾರೆ. ಇದೆಲ್ಲ ರಾಜಕೀಯ. ಹೀಗಾಗಿ ಅವರಿಂದ ಬಹಳ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ದೂರಿದರು.