ಹುಬ್ಬಳ್ಳಿ: ಸಿಎಂ ಆಗಿ ಅಧಿಕಾರ ಸ್ವೀಕರಿಸಿ ಹುಬ್ಬಳ್ಳಿಗೆ ಆಗಮಿಸಿದ ಬಸವರಾಜ ಬೊಮ್ಮಾಯಿ ಸ್ವಪಕ್ಷಿಯರ ಅಸಮಾಧಾನದಿಂದ ತವರು ಜಿಲ್ಲೆಯಲ್ಲಿಯೇ ಏಕಾಂಗಿಯಾಗಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಸಿಎಂ ಹುದ್ದೆಗೇರಿದ ಬಳಿಕ ಇದೇ ಮೊದಲ ಬಾರಿಗೆ ಹುಟ್ಟೂರಿಗೆ ಭೇಟಿ ನೀಡಿದ್ದ ಬೊಮ್ಮಾಯಿ ಆಗಮನದ ವೇಳೆ ಬಿಜೆಪಿ ಮುಖಂಡರು ಬಾರದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೇ ಸಿಎಂ ಬೊಮ್ಮಾಯಿಯಿಂದ ಇಲ್ಲಿನ ನಾಯಕರು ಅಂತರ ಕಾಯ್ದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.
ಇತ್ತ ಸಿಎಂ ಜೊತೆಗೆ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತ್ರ ಕಾಣಿಸಿಕೊಂಡಿದ್ದಾರೆ. ಆದರೆ ಧಾರವಾಡ ಪಶ್ಚಿಮ ಶಾಸಕ ಅರವಿಂದ ಬೆಲ್ಲದ್, ಕಲಘಟಗಿ ಶಾಸಕ ನಿಂಬಣ್ಣನವರ್, ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್, ಶಾಸಕ ಶಂಕರ ಪಾಟೀಲ್ ಮುನೇನಕೊಪ್ಪ, ಪರಿಷತ್ ಸದಸ್ಯ ಎಸ್.ವಿ.ಸಂಕನೂರು, ಮಾಜಿ ಎಂಎಲ್ಸಿ ಶಂಕರಣ್ಣ ಮುನವಳ್ಳಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್ ಕುಂದಗೋಳಮಠ ಸೇರಿದಂತೆ ಜಿಲ್ಲೆಯ ಬಹುತೇಕ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಿಎಂ ಬೊಮ್ಮಾಯಿಯಿಂದ ದೂರ ಉಳಿದಿದ್ದರು.