ಹುಬ್ಬಳ್ಳಿ: ಉಪಚುನಾವಣೆ ಎದುರಿಸಲು ಬಿಜೆಪಿ ಪಕ್ಷ ಸಿದ್ಧವಾಗಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ. ಪ್ರಕರಣ ಇತ್ಯರ್ಥವಾದ ಬಳಿಕ ದಿನಾಂಕ ನಿಗದಿ ಮಾಡಬೇಕಿತ್ತು. ಆದರೆ ಚುನಾವಣಾ ಆಯೋಗ ದಿನಾಂಕ ಘೋಷಿಸಿದೆ ಎಂದರು.
ನೆರೆ ಪರಿಹಾರ ಬಿಡುಗಡೆಗೆ ಯಾವುದೇ ವಿಳಂಬವಾಗಿಲ್ಲ. ನೆರೆ ಪರಿಹಾರ ಕೇಂದ್ರದಿಂದ ಬರುವುದು ಸ್ವಲ್ಪ ತಡವಾಗಿದೆ ಅಷ್ಟೇ, ಆದರೆ ರಾಜ್ಯ ಸರ್ಕಾರ ಈಗಾಗಲೇ 1 ಸಾವಿರ ಕೋಟಿ ರೂ ಬಿಡುಗಡೆ ಮಾಡಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣ ಇದೆ. ಆರಂಭದಲ್ಲಿ ಮನೆ ಹಾನಿಗೊಳಗಾದವರಿಗೆ ಒಂದು ಲಕ್ಷ ರೂ ಪರಿಹಾರ ನೀಡಲಾಗುತ್ತಿದೆ. 5 ಲಕ್ಷ ರೂ ವೆಚ್ಚದಲ್ಲಿ ಸಂತ್ರಸ್ಥರಿಗೆ ಮನೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದರು.
ಬಳ್ಳಾರಿ ಜಿಲ್ಲೆ ವಿಭಜನೆ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜಿಲ್ಲೆಗಳ ವಿಭಜನೆಯ ಸಂದರ್ಭದಲ್ಲಿ ಇದೆಲ್ಲವೂ ಸಹಜ. ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದು ಹೊಸ ಜಿಲ್ಲೆ ರಚನೆಯ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಮಹೇಶ್ ಕುಮಟಳ್ಳಿಗೆ ಡಿಸಿಎಂ ಲಕ್ಣ್ಮಣ ಸವದಿ ನಿಂದನೆ ವಿಚಾರ ನನಗೆ ಗೊತ್ತಿಲ್ಲ. ಯಾರು ಮಾತನಾಡಿದ್ದಾರೋ ಅವರೇ ಸ್ಟಷ್ಟಿಕರಣ ಕೊಟ್ಟಿದ್ದಾರೆ ಎಂದರು.