ಹುಬ್ಬಳ್ಳಿ:ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಅನ್ಯಾಯ ಮಾಡಿಲ್ಲ ಎಂಬ ಸಂದೇಶ ರವಾನಿಸಲು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೊರೆ, ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ನೇತೃತ್ವದಲ್ಲಿ ಭಾನುವಾರ ಲಿಂಗಾಯತ ಸಮುದಾಯ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ನೂರಾರು ಮುಖಂಡರು ಭಾಗಿಯಾಗಿದ್ದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ನಮ್ಮ ಭಾಗದಲ್ಲಿ ಹೊಸ ರೀತಿಯಲ್ಲಿ ಮತ ಕೇಳುವದು ಪ್ರಾರಂಭವಾಗಿದೆ. ಕಾಂಗ್ರೆಸ್ ನೋಡಿ ಮತ ಹಾಕಬೇಡಿ, ನನ್ನನ್ನು ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಆರ್ಟಿಕಲ್ 370ಗೆ ವಿರೋಧ ಮಾಡಿದವರು ಕಾಂಗ್ರೆಸ್. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ವಾಪಸ್ ಜಾರಿ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್ ನೋಡಿ ಮತ ಹಾಕಬೇಡಿ ನನ್ನ ನೋಡಿ ಮತ ಹಾಕಿ ಎನ್ನುವವರು ಕಾಂಗ್ರೆಸ್ ಪಕ್ಷ ಬಿಟ್ಟು ಬರ್ತಾರಾ? ಎಂದು ಪರೋಕ್ಷವಾಗಿ ಶೆಟ್ಟರ್ ವಿರುದ್ಧ ಜೋಶಿ ವಾಗ್ದಾಳಿ ನಡೆಸಿದರು. ಪಾರ್ಟಿ ನೋಡಿ ಮತ ನೀಡಬೇಡಿ, ನಮ್ಮನ್ನು ನೋಡಿ ಮತ ನೀಡಿ ಎನ್ನುವವರನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕಿ ಎಂದು ಅವರು ಮನವಿ ಮಾಡಿದರು.
ಇದನ್ನೂ ಓದಿ:ದೆಹಲಿಯಲ್ಲಿ ಗಂಗಾವತಿ ಮಾದರಿ ಆಸ್ಪತ್ರೆ ಅನುಷ್ಠಾನಕ್ಕೆ ಯತ್ನಿಸುವೆ: ಶಾಸಕ ಅಜಯ್ ಮಹಾರ್
ಉದ್ಯಮಿ ಡಾ.ವಿಜಯ ಸಂಕೇಶ್ವರ ಮಾತನಾಡಿ, ಜಗದೀಶ್ ಶೆಟ್ಟರ್ ವಿರುದ್ದ ಹರಿಹಾಯ್ದರು. ಶೆಟ್ಟರ್ ಯಾರೋ ಮಾಡಿದ ಕೆಲಸವನ್ನು ತಾವೇ ಮಾಡಿದ್ದಾಗಿ ಹೇಳುತ್ತಾರೆ. ಕಳೆದ ಚುನಾವಣೆಯಲ್ಲಿ ಅವರು 22 ಸಾವಿರ ಮತಗಳ ಅಂತರದಿಂದ ಆಯ್ಕೆಯಾದರು. ಇದೇ ಕ್ಷೇತ್ರದಿಂದ 52 ಸಾವಿರ ಮತಗಳ ಅಂತರದಿಂದ ಪ್ರಹ್ಲಾದ್ ಜೋಶಿಯವರು ಲೋಕಸಭೆಯಲ್ಲಿ ಆಯ್ಕೆಯಾದರು. 30 ಸಾವಿರ ಮತಗಳ ಅಂತರ ಯಾಕೆ ಬಂತು ಅನ್ನೋದನ್ನು ನೀವೇ ಯೋಚನೆ ಮಾಡಿ. ಇಷ್ಟೊಂದು ಮತಗಳು ಕಡಿಮೆ ಆಗುವ ಉದ್ದೇಶದಿಂದಲೇ ಶೆಟ್ಟರ್ ಅವರಿಗೆ ಟಿಕೆಟ್ ನೀಡಿಲ್ಲ. ಆದರೆ ಅವರು ಕಾರಣಗಳನ್ನು ಕೇಳುತ್ತಾರೆ. 52 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಪ್ರಹ್ಲಾದ್ ಜೋಶಿಯವರು ಈ ಭಾಗದಲ್ಲಿ ಸಾಕಷ್ಟು ಅಭಿವೃದ್ದಿ ಮಾಡಿದ್ದಾರೆ ಎಂದರು.