ಧಾರವಾಡ:ಸಿದ್ದರಾಮಯ್ಯ ಮತ್ತೆ ಸಿಎಂ ಆಗುತ್ತಾರೆ ಎಂಬ ಜಮೀರ್ ಅಹ್ಮದ್ ಹೇಳಿಕೆಗೆ ಧಾರವಾಡದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.
ಪಾಕಿಸ್ತಾನದಲ್ಲಿ ಮಾತ್ರ ಕಾಂಗ್ರೆಸ್ ಗೆಲ್ಲಬೇಕಷ್ಟೇ, ಭಾರತದಲ್ಲಂತೂ ಅಲ್ಲ: ಸಿ.ಟಿ.ರವಿ - CT Ravi statement
ಇನ್ನೆರಡು ಮುಕ್ಕಾಲು ವರ್ಷದಲ್ಲಿ ಬಿಜೆಪಿ ಇನ್ನಷ್ಟು ಶಕ್ತಿಶಾಲಿ ಆಗಲಿದ್ದು, ಪಾಕಿಸ್ತಾನದಲ್ಲಿ ಮಾತ್ರವೇ ಕಾಂಗ್ರೆಸ್ ಗೆಲ್ಲಬೇಕಷ್ಟೇ, ಭಾರತದಲ್ಲಿ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ಸಿಎಂ ಆಗುವ ಮಾತುಗಳನ್ನಾಡುತ್ತಿದ್ದಾರೆ. ಕೆಲವು ಸಂಗತಿಗಳನ್ನು ಕಾಲ ನಿರ್ಣಯಿಸುತ್ತದೆ. ಈಗ ದೇಶದಲ್ಲಿ ಬಿಜೆಪಿ ಕಾಲ ನಡೆಯುತ್ತಿದೆ. ತವರಿನಲ್ಲೇ ಅವರವರ ಪಾರ್ಟಿ ಗೆಲ್ಲಿಸಲು ಅವರಿಗೆ ಸಾಧ್ಯವಾಗಿಲ್ಲ. ಜಮೀರ್ ಅಹ್ಮದ್ ಬೆಂಗಳೂರಿನಲ್ಲಿಯೇ ತಮ್ಮ ಪಕ್ಷವನ್ನು ಗೆಲ್ಲಿಸಿಲ್ಲ ಎಂದು ವ್ಯಂಗ್ಯವಾಡಿದರು. ಇನ್ನು, ಮೈಸೂರು, ಬಾಗಲಕೋಟೆಯಲ್ಲಿ ತಮ್ಮ ಪಾರ್ಟಿ ಗೆಲ್ಲಿಸಲು ಸಿದ್ದರಾಮಯ್ಯಗೆ ಆಗಿಲ್ಲ. ಜನ ಯಾತಕ್ಕಾಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ತರಬೇಕು? ಸಮಾಜ ಒಡೆಯುವುದಕ್ಕಾ? ಎಂದು ಪ್ರಶ್ನಿಸಿದರು.
ತಮ್ಮದೇ ಪಕ್ಷದ ದಲಿತ ಶಾಸಕನಿಗೆ ರಕ್ಷಣೆ ಕೊಡದಂತಹ ಪಕ್ಷ ಅದು. ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಿದವರನ್ನು ಅಮಾಯಕರು ಎಂದಿರುವುದು ಕಾಂಗ್ರೆಸ್ ಪಕ್ಷ. ಈಗ ಕಾಂಗ್ರೆಸ್ ಕೋಟಾ ಮುಗಿದಿದೆ. ಮತ್ತೆ ಬಿಜೆಪಿಯೇ ಅಧಿಕಾರಕ್ಕೆ ಬರುತ್ತದೆ. ಇನ್ನೆರಡು ಮುಕ್ಕಾಲು ವರ್ಷದಲ್ಲಿ ಬಿಜೆಪಿ ಇನ್ನಷ್ಟು ಶಕ್ತಿಶಾಲಿ ಆಗುತ್ತದೆ. ಪಾಕಿಸ್ತಾನದಲ್ಲಿ ಮಾತ್ರವೇ ಕಾಂಗ್ರೆಸ್ ಗೆಲ್ಲಬೇಕಷ್ಟೇ, ಭಾರತದಲ್ಲಿ ಅಲ್ಲ ಎಂದರು.