ಹುಬ್ಬಳ್ಳಿ: ಹೈಕಮಾಂಡ್ ಎಲ್ಲಿ ಹೇಳುತ್ತಾರೆ ಅಲ್ಲಿ ನಾನು ಸ್ಪರ್ಧೆ ಮಾಡುತ್ತೇನೆ. ಸುಮಾರು 20 ರಿಂದ 25 ಕ್ಷೇತ್ರದಲ್ಲಿ ಕರೆಯುತ್ತಿದ್ದಾರೆ. ಎಲ್ಲ ಕಡೆ ನಿಲ್ಲುವುದಕ್ಕೆ ಆಗಲ್ಲ. ಅದಕ್ಕೆ ಕ್ಷೇತ್ರದ ತೀರ್ಮಾನವನ್ನು ನಾನು ಹೈಕಮಾಂಡ್ಗೆ ಬಿಟ್ಟಿದೀನಿ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಬಾದಾಮಿಗೆ ಆಗಾಗ ಬರುತ್ತಾ ಇರುತ್ತೇನೆ. ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ ಎನ್ನುವ ಬಿಜೆಪಿ ನಾಯಕರ ಮಾತಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಗದೆ ಇರುವ ತರಹ ಇದ್ದರೆ 20 ಕಡೆ ಯಾಕೆ ಕರೀತಾರೆ ಎಂದು ಅವರು ಮರು ಪ್ರಶ್ನೆ ಮಾಡಿದರು. ನನಗೆ ಯಾವುದೇ ಕ್ಷೇತ್ರ ಇಲ್ಲದೆ ಇದ್ದರೆ ಯಾಕೆ ಕರೀತಾರೆ. ಸೋಲುವವರನ್ನು ಕರೀತಾರಾ?. ಗೆಲ್ಲುವವರನ್ನು ಕರೀತಾರಾ? ಅಭಿಮಾನ ಪ್ರೀತಿಯಿಂದ ಕರೀತಾರೆ. ಮತ್ತೆ ಕ್ಷೇತ್ರ ಇಲ್ಲ ಹೇಗೆ ಅಂತಾರೆ ಎಂದು ಅವರು ಹೇಳಿದರು.
ಇದನ್ನೂ ಓದಿ :ನಾಳೆ ಸಿಲಿಕಾನ್ ಸಿಟಿಗೆ ಮೋದಿ ಆಗಮನ: ಈ ಮಾರ್ಗದ ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ರಾಹುಲ್ ಗಾಂಧಿ ಅನರ್ಹತೆ ವಿಚಾರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಇದು ಕರಾಳ ದಿನ. ಬಿಜೆಪಿಯವರು ಬೇಕು ಅಂತಾ ಬೇರೆ ನಾಯಕರನ್ನು ಎದುರಿಸಲಾಗದೆ ಮಾಡಿರುವ ಷಡ್ಯಂತ್ರ. ಬಹಳ ಜನ ಕೊಳ್ಳೆ ಹೊಡೆದು ವಿದೇಶಕ್ಕೆ ಹೋದರು. ವಿಜಯ ಮಲ್ಯ, ನೀರವ್ ಮೋದಿ ಇವರೆಲ್ಲ ಹೋದರು. ಇವರನ್ನು ಏನಂತ ಕರಿಬೇಕು. ಸಾರ್ವಜನಿಕರ ದುಡ್ಡು ಕೊಳ್ಳೆ ಹೊಡೆದವರನ್ನು ಏನಂತ ಕರೀಬೇಕು. ರಾಹುಲ್ ಗಾಂಧಿ ಕರೆದರೆ ತಪ್ಪಾ? ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವಾತಂತ್ರ್ಯ ಇಲ್ವಾ? ಎಂದು ಪ್ರಶ್ನಿಸಿದರು.