ಹುಬ್ಬಳ್ಳಿ:ರಾಜ್ಯ ಸರ್ಕಾರ ನಡೆಸುವುದು ತಂತಿ ಮೇಲೆ ನಡೆದಂಗ ಆಗುತ್ತಿದೆ ಎಂಬ ಮುಖ್ಯಮಂತ್ರಿ ಯಡಿಯೂರಪ್ಪನವರು ಹೇಳಿರುವುದು ನೂರಕ್ಕೆ ನೂರು ಸತ್ಯ. ಸಿಎಂಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೈಕಮಾಂಡ್ ಬಿಡುತ್ತಿಲ್ಲ, ಮುಂದೆಯೂ ಬಿಡುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ದಿನದ 16 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಅವರಿಗೆ ಯಾವುದೇ ನಿರ್ಧಾರ ಕೈಗೊಳ್ಳಲು ಆಗುತ್ತಿಲ್ಲ. ಮೈತ್ರಿ ಸರ್ಕಾರದಲ್ಲಿ ಈ ಹಿಂದೆ ಹೇಗಿತ್ತೋ ಅದೇ ರೀತಿ ಈಗ ಬಿಜೆಪಿಯಲ್ಲಿ ಆಗುತ್ತಿದೆ. ಈ ಹಿಂದೆ ಕುಮಾರಸ್ವಾಮಿಯವರೂ ಇದೇ ರೀತಿ ಮಾತುಗಳನ್ನಾಡುತ್ತಿದ್ದರು. ಆವಾಗ ಬಿಜೆಪಿಯವರು ಟೀಕೆ ಮಾಡುತ್ತಿದ್ದರು ಎಂದರು.
ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಅನರ್ಹರ ವಿಚಾರಣೆ ಹಾಗೂ ಚುನಾವಣೆ ಮುಂದೂಡಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನನ್ನ 38 ವರ್ಷದ ರಾಜಕೀಯದಲ್ಲಿ ಈ ರೀತಿ ಚುನಾವಣೆ ಮುಂದೂಡಿರುವುದು ನಾನು ನೋಡಿಲ್ಲ. ಬಿಜೆಪಿಯ ಕೆಲ ನಾಯಕರು ಹೇಳುತ್ತಾರೆ ಅನರ್ಹರಿಗೆ ಟಿಕೆಟ್ ಕೊಡಬೇಕು ಎಂದು ನಮಗೇನು ಬರೆದುಕೊಟ್ಟಿಲ್ಲ. 17 ಜನ ರಾಜೀನಾಮೆ ಕೊಟ್ಟಿರುವುದು ಅದರ ಹಿನ್ನೆಲೆಯನ್ನ ನೋಡಬೇಕು. ಶಾಸಕರನ್ನ ಅನರ್ಹಗೊಳಿಸಿರುವ ರಮೇಶ ಕುಮಾರ ಅವರ ನಿರ್ಧಾರ ಸರಿಯಾಗಿದೆ. ಆದರೆ, ಅನರ್ಹ ಶಾಸಕರನ್ನ ರಕ್ಷಣೆ ಮಾಡುವುದು ಬಿಜೆಪಿಯವರ ಕರ್ತವ್ಯವಾಗಿದೆ ಎಂದು ಹೇಳಿದರು.
ವೀರಶೈವ ಲಿಂಗಾಯತ ಧರ್ಮ ಈ ಹಿಂದೆ ತತ್ವಾಧಾರಗಳ ಮೇಲೆ ನಡೆದಿತ್ತು. ಆದರೆ, ಅದನ್ನ ಕೆಲವರು ಹೈಜಾಕ್ ಮಾಡಿದ್ದಾರೆ. ಅದರ ಬಗ್ಗೆ ನಾನೇನೂ ಹೇಳಲ್ಲ. ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರ ನ್ಯಾಯಾಲಯದಲ್ಲಿದೆ. ನ್ಯಾಯಾಲಯ ಏನು ತೀರ್ಪು ನೀಡುತ್ತೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದರು.