ಹುಬ್ಬಳ್ಳಿ : ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಸಂಬಂಧ ಎಸ್‌ಸಿ, ಎಸ್ಟಿ ಸಮುದಾಯದಿಂದ ಅಭಿನಂದನಾ ಸಮಾರಂಭವನ್ನು ಏಪ್ರಿಲ್ 6 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ ತಿಳಿಸಿದರು.
ನಗರದಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಂಡುಮೆಟ್ಟಿನ ನಾಡಿನಲ್ಲಿ ಅಭಿನಂದನಾ ಸಮಾರಂಭ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಇದು ಸರಿಯಿಲ್ಲ. ನಾವು ಈ ಮೀಸಲಾತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಿ, ಒಳ ಮೀಸಲಾತಿಗೆ ಸೇರಿಸಿದ್ದಾರೆ. ಸಿದ್ದರಾಮಯ್ಯಗೆ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್‌ನ ನಿಜಬಣ್ಣ ಈಗ ಬಯಲಾಗಿದೆ. ಜನರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿದವರಿಗೆ ಜನರ ಬಗ್ಗೆ ಏನು ಗೊತ್ತಿರಲು ಸಾಧ್ಯ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಇತರರು ಸೇರಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದರು. ಇದೀಗ ಈ ಮೀಸಲಾತಿಗೆ ಹಲವು ಸಮುದಾಯಗಳು ಸೇರಿಕೊಂಡಿವೆ. ಈ ಸಮುದಾಯಗಳು ಮತ್ತೆ ತಮ್ಮ ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ಕಳೆದ 32 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಜೊತೆಗೆ ಒಳ ಮೀಸಲಾತಿ ನೀಡುವಂತೆ ಒತ್ತಾಯ ಕೇಳಿಬಂದಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಮೇಲೆ ಎಲ್ಲಾ ಸಮುದಾಯಕ್ಕೆ ಮೀಸಲಾತಿ ನೀಡಿದೆ ಎಂದು ಹೇಳಿದರು.