ಹುಬ್ಬಳ್ಳಿ:ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕ ನಿರ್ಧಾರ. ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್‌ಗಳೆಂದು ತಿಳಿದುಕೊಂಡಿತ್ತು. ಕಾಂಗ್ರೆಸ್ ಹಿಂದುಳಿದವರ ಕಲ್ಯಾಣ ಮಾಡಲಿಲ್ಲ. ಇದೇ ಕಾರಣಕ್ಕೆ ದಲಿತರ ಸ್ಥಿತಿ ಹೀನಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನಗರದಲ್ಲಿಂದು ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ವಿಶ್ವಕ್ಕೆ ಅತ್ಯುತ್ತಮ ಗ್ರಂಥವನ್ನು ಕೊಟ್ಟಿರುವುದು ಮಹಶ್ರೀ ವಾಲ್ಮೀಕಿ. ನೈಜ ಘಟನೆಯನ್ನು ರಾಮಾಯಣದಲ್ಲಿ ಚಿತ್ರಿಸಿದ್ದಾರೆ. ಸರ್ಕಾರ ಮೀಸಲಾತಿ ಹೆಚ್ಚಿಸಿ ಮಹತ್ತರ ಕೊಡುಗೆಯನ್ನು ಕೊಟ್ಟಿದೆ. ಇದಕ್ಕೆ ಕಾರಣವಾದ ಸಿಎಂ, ಸಚಿವರು, ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾಧ್ಯಮದೋಂದಿಗೆ ಮಾತನಾಡಿದರು. ಬಿಜೆಪಿ ದೀನ ದಲಿತರ, ಬಡವರ ಪರ ಪಕ್ಷ ಎಂಬುದನ್ನು ಸಾಬೀತು ಮಾಡಿದೆ. ಪಂಚಮಸಾಲಿ ಸೇರಿದಂತೆ ಅನೇಕ ಸಮುದಾಯಗಳು ಮೀಸಲಾತಿ ಹೋರಾಟ ಮಾಡುತ್ತಿವೆ. ಈ ಬಗ್ಗೆ ಸಿಎಂ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಗಳು ಮೀಸಲಾತಿ ಕೊಡುತ್ತೇವೆಂದು ಭರವಸೆ ನೀಡಿದ್ದಾರೆ. ಅವರು ಮೀಸಲಾತಿ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.
ರಾಹುಲ್ ಗಾಂಧಿಯನ್ನು ಅಪ್ರಯೋಜಕ ಎಂದು ಬಿಂಬಿಸುವ ಅವಶ್ಯಕತೆ ಬಿಜೆಪಿಗೆ ಇಲ್ಲ. ಜನರೇ ಅವರು ನಿಷ್ಪ್ರಯೋಜಕ ಎಂದು ತೀರ್ಮಾನಿಸಿದ್ದಾರೆ. ಹೀಗಾಗಿ ದೇಶಾದ್ಯಂತ ಕಾಂಗ್ರೆಸ್ ನೆಲ ಕಚ್ಚಿದೆ. ಭಾರತ ಜೋಡೋದಿಂದ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಬಹುದು. ಇದರಿಂದಾಗಿ ಕಾಂಗ್ರೆಸ್‌ಗೆ ಯಾವುದೇ ಲಾಭವಿಲ್ಲ ಎಂದು ವ್ಯಂಗ್ಯವಾಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಧ್ಯಮದೊಂದಿಗೆ ಮಾತನಾಡಿದರು. ಯಾವ ಸರ್ಕಾರವೂ ಮಾಡದ ಧೈರ್ಯ ಬೊಮ್ಮಾಯಿ ಸರ್ಕಾರ ಮಾಡಿದೆ:ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾತನಾಡಿ, ಈ ಬಾರಿಯ ವಾಲ್ಮೀಕಿ ಜಯಂತಿ ವಿಶೇಷವಾದದ್ದು. ಪ್ರತೀ ವರ್ಷ ಮೀಸಲಾತಿ ಹೆಚ್ಚಿಸಲು ಬೇಡಿಕೆ ಇರುತ್ತಿತ್ತು. ಮೀಸಲಾತಿ ಹೆಚ್ಚಳ ಬಗ್ಗೆ ನಾಗಮೋಹನದಾಸ್ ವರದಿ ಕೊಟ್ಟಾಗಿನಿಂದ ಬೇಡಿಕೆ ಇತ್ತು. ಆದರೆ ಯಾವ ಸರ್ಕಾರವೂ ಮೀಸಲಾತಿ ಹೆಚ್ಚಳ ಮಾಡಲು ಧೈರ್ಯ ಮಾಡಿರಲಿಲ್ಲ. ಆದರೆ ಬಸವರಾಜ ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಹೇಳಿದರು.
ಕೋರ್ ಕಮಿಟಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನವಾಗಿತ್ತು. ನಿನ್ನೆ ಸಂಪುಟದಲ್ಲಿ ಬಹಳ ದಿನದ ಬೇಡಿಕೆಗೆ ನಮ್ಮ ಸರ್ಕಾರ ಅಸ್ತು ಅಂದಿದೆ. ಇದೊಂದು ಐತಿಹಾಸಿಕ ನಿರ್ಧಾರ. ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ರಾಮನ ವ್ಯಕ್ತಿತ್ವ ಜಗತ್ತಿಗೆ ತೋರಿಸಿದ್ದು ವಾಲ್ಮೀಕಿ. ರಾಮನನ್ನು ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ ಎಂದು ಗುಣಗಾನ ಮಾಡಿದರು.
ಇದನ್ನೂ ಓದಿ:ಸಿದ್ದರಾಮಯ್ಯರದ್ದು ಅಹಿಂದ ಮುಖವಾಡ, ಮೀಸಲಾತಿ ಹೆಚ್ಚಿಸಿದ ಬೊಮ್ಮಾಯಿ ಶ್ರೀರಾಮಚಂದ್ರ: ಸಚಿವ ಶ್ರೀರಾಮುಲು