ಹುಬ್ಬಳ್ಳಿ: ಬಿಜೆಪಿಯವರು ರಾಜಕೀಯ ಸೇಡು ತೀರಿಸಿಕೊಳ್ಳಲು ವಿನಯ್ ಕುಲಕರ್ಣಿ ಮೇಲೆ ಕೇಸ್ ಹಾಕಿಸಿದ್ದಾರೆ. ಕುಲಕರ್ಣಿ ಪ್ರಕರಣ ಸೆಷನ್ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ತೀರ್ಪು ಬರುವ ಮೊದಲೇ ಯಡಿಯೂರಪ್ಪ ಸರ್ಕಾರ ಈ ಕೇಸನ್ನು ಸಿಬಿಐಗೆ ವಹಿಸಿದೆ. ಈ ಸರ್ಕಾರಕ್ಕೆ ಕರ್ನಾಟಕದಲ್ಲಿರುವ ಕೋರ್ಟ್‌ಗಳ ಮೇಲೆ ನಂಬಿಕೆ ಇಲ್ಲ ಎಂದು ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್ ವ್ಯಂಗ್ಯವಾಡಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ ಗೌಡ ಕೊಲೆ ಪ್ರಕರಣವನ್ನು ಸಿಬಿಐಗೆ ವಹಿಸುವುದು ಬೇಡ ಎಂದು ಈಗಾಗಲೇ ಕೋರ್ಟ್ ಸಹ ಹೇಳಿತ್ತು. ಆದರೆ, ಬಿಜೆಪಿ ದ್ವೇಷದ ಭಾವನೆಯಿಂದ, ರಾಜಕೀಯ ದುರುದ್ದೇಶದಿಂದ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದೆ. ಈ ಭಾಗದ ಸಂಸದರು, ಕೇಂದ್ರ ಮಂತ್ರಿಗಳು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ರಾಜಕೀಯ ವೈರಿಗಳನ್ನ ಹತ್ತಿಕ್ಕಲು ಈ ಮಾರ್ಗವನ್ನು ಅನುಸರಿಸಿದ್ದಾರೆ, ಆದರೆ, ಇದು ಬಹಳ ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು.