ಹುಬ್ಬಳ್ಳಿ:ವಿಧಾನ ಪರಿಷತ್ನ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಘೋಷಣೆಯಾಗಿದ್ದು, ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಜಟಾಪಟಿಗೆ ವೇದಿಕೆಯಾಗಿದೆ. ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಬಸವರಾಜ್ ಹೊರಟ್ಟಿ ಸ್ಪರ್ಧೆ ಮಾಡುತ್ತಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಬಸವರಾಜ ಹೊರಟ್ಟಿ ವಿರುದ್ಧ ಬಸವರಾಜ್ ಗುರಿಕಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆಗೆ ಇಳಿದಿದ್ದು, ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಗರಿಗೇದರಿವೆ. ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಹೇಗಾದರೂ ಮಾಡಿ ಈ ಸಲ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುಲು ಕಾಂಗ್ರೆಸ್ ಕಾತರಿಸುತ್ತಿದೆ. ಅಲ್ಲದೇ ಶಿಕ್ಷಕರ ಕ್ಷೇತ್ರದಲ್ಲಿ ಬರೋಬ್ಬರಿ ಏಳು ಬಾರಿ ಗೆದ್ದು ದಾಖಲೆ ನಿರ್ಮಿಸಿರುವ ಹೊರಟ್ಟಿಯವರು ಈ ಬಾರಿ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿರುವುದು ವಿಶೇಷ.
ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಏಳು ಸ್ಪರ್ಧೆಯಲ್ಲಿ ಹೊರಟ್ಟಿ ಮೊಟ್ಟ ಮೊದಲ ಬಾರಿಗೆ ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಕಂಡಿದ್ದರು. ಬಳಿಕ ನಡೆದ ಆರು ಚುನಾವಣೆಯಲ್ಲಿ ಜನತಾ ಪರಿವಾರದಿಂದ ಸ್ಪರ್ಧಿಸಿ ಜಯ ಸಾಧಿಸಿದ್ದರು. ಸದ್ಯ ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಬಿಜೆಪಿ ಸೇರ್ಪಡೆಯಾಗಿ, ಆ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ.
ವಯಸ್ಸಿನ ಮಿತಿ ಅಡ್ಡಿ ಇಲ್ಲವೇ?:ಜೆಡಿಎಸ್ ಹಿರಿಯ ನಾಯಕರಾದ ಹಾಲಿ ವಿಧಾನ ಪರಿಷತ್ ಸಭಾಪತಿ ಹೊರಟ್ಟಿ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಬಿಜೆಪಿ ಸೇರ್ಪಡೆಯನ್ನು ಖಚಿತ ಪಡಿಸಿದ್ದಾರೆ. ಆದರೆ, ಸಭಾಪತಿ ಹುದ್ದೆಗೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಮೇಲಾಗಿ ಬಿಜೆಪಿಯಲ್ಲಿ 75 ದಾಟಿದವರಿಗೆ ಟಿಕೆಟ್ ನೀಡುವುದಿಲ್ಲ ಎಂಬ ಮಾತಿದೆ. ಆದರೆ, ಹೊರಟ್ಟಿ ಅವರಿಗೆ ಈಗ 76 ವರ್ಷ. ಹೀಗಾಗಿ ವಯಸ್ಸಿನ ವಿನಾಯಿತಿ ನೀಡುವುದೇ ಬಿಜೆಪಿ ಎಂದು ಸದ್ಯದ ಯಕ್ಷ ಪ್ರಶ್ನೆಯಾಗಿದೆ.
ಕಾಂಗ್ರೆಸ್ ಪ್ರತಿತಂತ್ರ:ಇಷ್ಟು ವರ್ಷ ಜೆಡಿಎಸ್ ಪ್ರತಿನಿಧಿಸುತ್ತಿದ್ದ ಹೊರಟ್ಟಿ ಅವರಿಗೆ ಸೋಲಿನ ರುಚಿ ತೋರಿಸಬೇಕೆಂಬ ಇರಾದೆ ಕಾಂಗ್ರೆಸ್‌ನದ್ದು, ಈ ಹಿನ್ನೆಲೆಯಲ್ಲಿ ಮತದಾರರ ನೋಂದಣಿ, ಪ್ರಚಾರವನ್ನೂ ಭರ್ಜರಿಯಾಗಿ ನಡೆಸಿದೆ. ಇತ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ತಾವೇ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಶುರು ಮಾಡಿದ್ದರು. ಅದಕ್ಕೆ ತಕ್ಕಂತೆ ಕೇಂದ್ರ ಸಮಿತಿಗೂ ಅವರದೊಬ್ಬರದೇ ಹೆಸರು ಹೋಗಿತ್ತು. ಈಗ ಹೊರಟ್ಟಿ ಬಿಜೆಪಿಗೆ ಬರುತ್ತಿರುವುದು, ಹಿರಿಯರನ್ನು ಭೇಟಿಯಾಗಿ ಚರ್ಚೆ ನಡೆಸಿರುವುದು ಲಿಂಬಿಕಾಯಿಗೆ ನುಂಗಲಾರದ ತುತ್ತಾಗಿದೆ.
ಇದನ್ನೂ ಓದಿ:ಸಭಾಪತಿ ಸ್ಥಾನಕ್ಕೆ ಮೇ 18ರಂದು ರಾಜೀನಾಮೆ ನೀಡುವೆ: ಬಸವರಾಜ ಹೊರಟ್ಟಿ