ಹುಬ್ಬಳ್ಳಿ:"ಇವತ್ತು ರಾತ್ರಿ ಅಥವಾ ನಾಳೆ ಬಿಜೆಪಿ ಪಟ್ಟಿ ಬಿಡುಗಡೆ ಆಗಬಹುದು. ಇಂದು ಸಂಜೆ ಪಾರ್ಲಿಮೆಂಟರಿ ಮೀಟಿಂಗ್ ಫಿಕ್ಸ್ ಆಗಿದೆ. ರಾತ್ರಿ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂಬ ಮಾಹಿತಿ ಇದೆ" ಎಂದು ಜಗದೀಶ್ ಶೆಟ್ಟರ್ ಹೇಳಿದರು.
ನಗರದದಲ್ಲಿಂದು ಬಿಜೆಪಿ ಮಾಧ್ಯಮ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, "ಕಳೆದ ಬಾರಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ನಾವು ಲಿಸ್ಟ್ ಬಿಡುಗಡೆ ಮಾಡಿದ್ದೆವು. ಹೀಗಾಗಿ ವಿಳಂಬ ಎನ್ನುವ ಪ್ರಶ್ನೆ ಬರಲ್ಲ. ಕಾಂಗ್ರೆಸ್‌ನವರು ಒಂದು ತಿಂಗಳ ಮುಂಚೆ 224 ಕ್ಷೇತ್ರಕ್ಕೆ ಟಿಕೆಟ್ ಘೋಷಣೆ ಮಾಡ್ತೀವಿ ಎಂದು ಹೇಳಿದ್ದರು. ಜೆಡಿಎಸ್ ಇನ್ನೂ ಕೊನೇಯ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಎಲ್ಲವೂ ಫೈನಲ್ ಆಗಿ, ಇಂದು ಮೊದಲನೇ ಪಟ್ಟಿ ಬಿಡುಗಡೆ ಆಗುವ ಭರವಸೆ ಇದೆ" ಎಂದರು.
ಹಾಲಿ ಶಾಸಕರಿಗೆ ಟಿಕೆಟ್ ತಪ್ಪುವ ವಿಚಾರಕ್ಕೆ ಪ್ರತಿಕ್ರಿಯಿಸಿ, "ಇದು ಪ್ರತಿ ಎಲೆಕ್ಷನ್‌ನಲ್ಲಿರುವ ಪ್ರೋಸೆಸ್. ಕೆಲವು ಕಡೆ ಶಾಸಕರಿಗೆ ವಿರೋಧಿ ಅಲೆ ಇರುತ್ತೆ, ಕೆಲವರಿಗೆ ಆರೋಗ್ಯ ಸಮಸ್ಯೆ ಇರುತ್ತೆ. ಹಾಗಾಗಿ ಟಿಕೆಟ್ ತಪ್ಪುವ ಚರ್ಚೆ ನಡೆಯುತ್ತಿರುತ್ತದೆ" ಎಂದು ಉತ್ತರಿಸಿದರು. ಧಾರವಾಡದಲ್ಲಿ ಯಾರಿಗಾದ್ರೂ ಟಿಕೆಟ್ ತಪ್ಪುತ್ತದೆಯೇ ಎಂಬ ಪ್ರಶ್ನೆಗೆ, "ಅದನ್ನು ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ನಾನು ಈ ಬಾರಿ ಸ್ಪರ್ಧೆ ಮಾಡ್ತೀನಿ. ಪದೇ ಪದೇ ನಾನು ಅದಕ್ಕೆ ಉತ್ತರ ಕೊಡಲ್ಲ, ನಾನು ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡೋದು ಖಚಿತ" ಎಂದು ತಿಳಿಸಿದರು.