ಹುಬ್ಬಳ್ಳಿ: 2023ರ ವಿಧಾನಸಭೆ ಚುನಾವಣೆಗೆ ಅಭೂತಪೂರ್ವ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಪರ ಮತ ಚಲಾಯಿಸಲು ಕರ್ನಾಟಕದ ಜನ ಸಿದ್ಧರಾಗಿದ್ದಾರೆ. ರಾಹುಲ್ ಗಾಂಧಿಗೆ ಯಾವುದೇ ದೂರದೃಷ್ಟಿ ಇಲ್ಲ. ಅವರನ್ನು ಯಾರು ನಾಯಕ ಅಂತಾ ಒಪ್ಪಿಕೊಳ್ಳುವುದಿಲ್ಲಾ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಡಬಲ್ ಇಂಜಿನ್ ಸರ್ಕಾರದಿಂದ ಕರ್ನಾಟಕದಲ್ಲಿ ಅಭಿವೃದ್ಧಿ ಪರ್ವ ನಡೆದಿದೆ. ಹೀಗಾಗಿ ಈಗಾಗಲೇ ದೇಶದ ಜನ ನರೇಂದ್ರ ಮೋದಿಜಿ ಪರ ಫಲಿತಾಂಶ ನೀಡಿದ್ದಾರೆ. ಹಲವು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅದೇ ರೀತಿ ಕರ್ನಾಟಕದಲ್ಲಿ ಸಹ ಬಿಜೆಪಿ 150ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯ ಸಾಧಿಸಿ ಮತ್ತೆ ಅಧಿಕಾರಕ್ಕೆ ಬರುತ್ತೆ ಎಂಬ ವಿಶ್ವಾಸವನ್ನು ಅರುಣ್ ಸಿಂಗ್ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ 2013ರ ಇತಿಹಾಸ ನಿರ್ಮಾಣವಾಗುತ್ತೆ ಎನ್ನುವುದು ಆಧಾರರಹಿತ, ಈಗಾಗಲೇ ದೇಶದಲ್ಲಿ ಕಾಂಗ್ರೆಸ್ ಸೋಲಿನ ಅಲೆ ಆರಂಭವಾಗಿದೆ. ಬಿಜೆಪಿ ಗೆಲುವಿನ ಅಲೆ ಎದ್ದಿದೆ. ರಾಹುಲ್ ಗಾಂಧಿ ದೇಶದಲ್ಲಿ ಮಾಡುತ್ತಿರುವ ಭಾರತ ಜೋಡೋ ಯಾತ್ರೆಯಲ್ಲಿ ಯಾವುದೇ ವಿಶೇಷ ವಿಷಯಗಳಿಲ್ಲದ ಕಾರಣ ಸುಮ್ಮನೆ ಬಿಜೆಪಿ ವಿರುದ್ಧ ಹಾರಿಕೆ ಟೀಕೆಗಳನ್ನು ಮಾಡುತ್ತಾ ಓಡಾಡುತ್ತಿದ್ದಾರೆ. ಇದು ಭಾರತ ಜೋಡೋ ಯಾತ್ರೆ ಅಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯ ಜೋಡಿಸುವ ಜೋಡೋ ಯಾತ್ರೆ ಹಾಗಾಗಿ ಭಾರತ ಜೋಡೋ ಯಾತ್ರೆ ವಿಫಲವಾಗಿದೆ ಎಂದರು.
ಬಸನಗೌಡ ಪಾಟೀಲ್ ಯತ್ನಾಳ ಪಕ್ಷದ ನಾಯಕ ಅಲ್ಲ, ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರು ಅಲ್ಲ. ಅವರ ಸ್ವಭಾವವೇ ಹಾಗೇ. ಅವರ ಹೇಳಿಕೆಗಳಿಗೆ ಹೆಚ್ಚು ಮಹತ್ವ ಕೊಡುವ ಅವಶ್ಯಕತೆ ಇಲ್ಲ ಎಂದು ಯತ್ನಾಳ ವಿರುದ್ಧ ಅರುಣ್ ಸಿಂಗ್ ಕಿಡಿಕಾರಿದರು.