ಹುಬ್ಬಳ್ಳಿ:ಹುಬ್ಬಳ್ಳಿಯ ಖ್ಯಾತ ಉದ್ಯಮಿ ಭರತ್ ಜೈನ್ ಅವರ ಪುತ್ರ ಅಖಿಲ್ ಜೈನ್ (30) ಮಿಸ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ತಂದೆಯೇ ಸುಪಾರಿ ಕೊಟ್ಟು ಮಗನನ್ನು ಹತ್ಯೆ ಮಾಡಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ.
ಉದ್ಯಮಿ ಭರತ್ ಜೈನ್ ಪುತ್ರ ಅಖಿಲ್ ಜೈನ್ ಕಳೆದ ಡಿಸೆಂಬರ್ 1 ರಿಂದ ನಾಪತ್ತೆಯಾಗಿದ್ದಾನೆಂದು ಕುಟುಂಬಸ್ಥರು ಕೇಶ್ವಾಪುರ ಪೊಲೀಸರಿಗೆ ದೂರು ನೀಡಿದ್ದರು. ಅಖಿಲ್ ಕುರಿತು ಮಾಹಿತಿ ಕಲೆ ಹಾಕಿದ ಪೊಲೀಸರಿಗೆ ಹಲವು ಅಚ್ಚರಿಯ ವಿಚಾರಗಳು ಗೊತ್ತಾಗಿದ್ದವು. ದುಷ್ಟಚಟಗಳ ದಾಸನಾಗಿದ್ದ ಅಖಿಲ್ ಬಗ್ಗೆ ಮನೆಯವರೇ ರೋಸಿ ಹೋಗಿದ್ದರು ಅನ್ನೋ ವಿಷಯ ಪೊಲೀಸರಿಗೆ ತಿಳಿದಿದೆ.
ಅಖಿಲ್ ಸೇರಿದಂತೆ ಕುಟುಂಬಸ್ಥರ ಫೋನ್ ಕರೆಗಳ ಪರಿಶೀಲನೆ ನಡೆಸಿದ ಪೊಲೀಸರಿಗೆ ಇನ್ನಷ್ಟು ಬೆಚ್ಚಿ ಬೀಳಿಸುವ ಮಾಹಿತಿಗಳು ಸಿಕ್ಕಿವೆ. ಅಖಿಲ್ ತಂದೆ ಭರತ್ ಕೆಲವು ಕುಖ್ಯಾತ ರೌಡಿಗಳ ಸಂಪರ್ಕದಲ್ಲಿ ಇದ್ದದ್ದು ಗೊತ್ತಾಗಿದೆ. ಅಖಿಲ್ ನಾಪತ್ತೆಗೆ ಮೊದಲು ಭರತ್ ಸಂಪರ್ಕದಲ್ಲಿದ್ದ ರೌಡಿಗಳು ಕುಖ್ಯಾತ ಸುಪಾರಿ ಹಂತಕರು ಎಂಬುದು ತಿಳಿದುಬಂದಿದೆ. ಹೀಗಾಗಿ ಉದ್ಯಮಿ ಭರತ್‌ನನ್ನು ಕರೆಸಿ ವಿಚಾರಣೆ ಮಾಡಿದಾಗ ಆಘಾತಕಾರಿ ವಿಷಯ ಹೊರಬಂದಿದೆ. ಮಗನನ್ನು ತಾನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದಾಗಿ ಭರತ್ ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಈ ಕುರಿತು ಪೊಲೀಸರು ಯಾವುದೇ ಸ್ಪಷ್ಟನೆ ನೀಡುತ್ತಿಲ್ಲ. ಯಾಕಂದ್ರೆ ಪೊಲೀಸರಿಗೆ ಅಖಿಲ್ ಮೃತದೇಹ ಇನ್ನೂ ಸಿಕ್ಕಿಲ್ಲ. ಹೀಗಾಗಿ ದೇವರ ಗುಡಿಹಾಳದಲ್ಲಿರುವ ಭರತ್ ಫಾರ್ಮ್‌ಹೌಸ್ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಅಖಿಲ್ ಮೃತದೇಹಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸುಪಾರಿ ಹಂತಕರು ಕೊಲೆ ಮಾಡಿ ಮೃತದೇಹವನ್ನು ಎಲ್ಲಿ ಎಸೆದಿದ್ದಾರೆ ಎಂಬ ತನಿಖೆಯನ್ನು ಕೇಶ್ವಾಪುರ ಠಾಣೆ ಪೊಲೀಸರು ನಡೆಸುತ್ತಿದ್ದಾರೆ. ನಾಪತ್ತೆಯಾಗಿರುವ ಸುಪಾರಿ ಹಂತಕರ ಬಂಧನಕ್ಕೂ ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಕಾಣೆಯಾಗಿದ್ದ ವೃದ್ಧೆಯ ಶವ ವಾರ್ಡ್ರೋಬ್ನಲ್ಲಿ ಪತ್ತೆ: ಕೊಲೆ ಶಂಕೆ