ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತಿದೆ ಹೊರತು ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ. ವೈಯಕ್ತಿಕ ಹಿತಾಸಕ್ತಿಯಿಂದಲೇ ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆದರೂ ರಾಜ್ಯದಲ್ಲಿ ವಾಪಸ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗಾರರು ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಒತ್ತಾಯಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಸಹಿತ ಕಬ್ಬು ಬೆಳೆಗಾರರ ಸಮಸ್ಯೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ನಮ್ಮ ರಾಜ್ಯದ ಕಬ್ಬು ಪಂಜಾಬಿನಲ್ಲಿ ಬೆಳೆಯುವ ಕಬ್ಬಿಗೆ ಹೋಲಿಕೆ ಮಾಡಿದರೇ ಗುಣಮಟ್ಟದಲ್ಲಿ ನಮ್ಮದು ಉತ್ತಮವಾಗಿದೆ. ಆದರೂ ರೈತರಿಗೆ ದೇಶದಲ್ಲಿ ಅತಿ ಕಡಿಮೆ ಬೆಂಬಲ ಬೆಲೆ ಸಿಗುತ್ತಿರುವುದು ದುರಂತ ಎಂದರು.
ಸರ್ಕಾರಗಳು ಹಸಿರು ಟವಲ್ ಹಾಕಿಕೊಂಡು ನಾವು ರೈತಪರ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತವೆಯೇ ಹೊರತು ರೈತರಿಗೆ ಅನುಕೂಲ ಮಾಡಿಕೊಡುವುದಿಲ್ಲ. ಹಾಗಾಗಿ ಸರ್ಕಾರಗಳು ಇನ್ನಾದರೂ ರೈತಪರ ಕೆಲಸ ಮಾಡಿ ತೋರಿಸಲಿ ಎಂದು ಸವಾಲು ಹಾಕಿದರು.
ಸ್ಮಾರ್ಟ್ ಸಿಟಿ ಉದ್ದೇಶವೇ ವಿಫಲ:ಸಣ್ಣ ಸಣ್ಣ ನಗರಗಳು ಬೆಳೆಯುತ್ತಿರುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ. ಇದರ ಉದ್ದೇಶ ರಾಜಕಾಲುವೆ, ನೀರಿನ ಪೈಪ್, ರಸ್ತೆ, ವಿದ್ಯುತ್ ಹೀಗೆ ಮೂಲ ಸೌಕರ್ಯಗಳನ್ನು ಗುಣಮಟ್ಟದಲ್ಲಿ ಕೊಡುವುದು ಆಗಿದೆ.