ಹುಬ್ಬಳ್ಳಿ:ನಗರದ ರಾಜನಗರದ ಕೆ.ಎಸ್.ಸಿ.ಎ ಮೈದಾನದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ ಡ್ರಾ ನಲ್ಲಿ ಅಂತ್ಯಗೊಂಡಿತು.
ಮೂರು ವರ್ಷಗಳ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಆರಂಭಗೊಂಡಿದ್ದ ನಾಲ್ಕು ದಿನಗಳ ಪಂದ್ಯದಲ್ಲಿ ಕೇವಲ ಒಂದೂವರೆ ದಿನಗಳವರೆಗೆ ಪಂದ್ಯ ನಡೆದರೂ ಸಹಿತ ಅದು ಪೂರ್ತಿಯಾಗಿ ಆಡಲು ಮಳೆ ಅನುವು ಮಾಡಿಕೊಡಲಿಲ್ಲ. ಹೀಗಾಗಿ, ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾ ನಲ್ಲಿ ಸಮಾಪ್ತಿಗೊಂಡಿತು.
ಶುಕ್ರವಾರ ನಡೆದ ಭಾರತ ಎ ತಂಡದ ಬ್ಯಾಟಿಂಗ್ನಲ್ಲಿ 66 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 229 ರನ್ ಆಟ ಮುಂದುವರೆಸಿತ್ತು. ಆದರೆ ಶನಿವಾರ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ ಹಿನ್ನೆಲೆ ಪಂದ್ಯವನ್ನು ಭಾನುವಾರಕ್ಕೆ ಮುಂದೂಡಲಾಗಿತ್ತು. ಆದರೆ, ಭಾನುವಾರ ಭಾರತ ತಂಡ ಆಟವನ್ನು ಮುಂದುವರೆಸದೆ ಡಿಕ್ಲೇರ್ ಘೋಷಣೆ ಮಾಡಿ ನ್ಯೂಜಿಲೆಂಡ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ನೀಡಿತು.
ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯ ಡ್ರಾನಲ್ಲಿ ಸಮಾಪ್ತಿ ಭಾನುವಾರ ಮಧ್ಯಾಹ್ನ 1 : 10 ನಿಮಿಷಕ್ಕೆ ಆರಂಭಗೊಂಡ ಪಂದ್ಯವನ್ನು 60 ಓವರಗಳನ್ನು ಆಡಿಸಬೇಕೆಂದು ನಿರ್ಧರಿಸಿ ಆಟ ಆರಂಭಿಸಲಾಯಿತು. ಪಂದ್ಯ ಆರಂಭದ ನಂತರ ಆಗಿಂದಾಗ್ಗೆ ವರುಣನ ಅವಕೃಪೆಯಿಂದ ಪಂದ್ಯವನ್ನು ನಿಲ್ಲಿಸುವುದು, ಆಡಿಸುವುದು ಮಾಡಲಾಯಿತು.
ನ್ಯೂಜಿಲೆಂಡ್ ಎ ತಂಡದ ರಚಿನ್ ರವೀಂದ್ರ ಹಾಗೂ ಜೋ ಕಾರ್ಟರ್ ಪಂದ್ಯವನ್ನು ಆರಂಭಿಸಿದರು. ತಂಡದ ಮೊತ್ತ 9.5 ಓವರ್ಗಳಲ್ಲಿ 38 ರನ್ ಗಳಿಸಿದ್ದಾಗ ಜೋ ಕಾರ್ಟರ್ ಮುಖೇಶ್ ಕುಮಾರ್ ಅವರ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಕೆ. ಎಸ್. ಭರತ ಅವರಿಗೆ ಕ್ಯಾಚ್ ನೀಡಿ ಹೊರ ನಡೆದರು. ನಂತರ ರಚಿನ್ ರವೀಂದ್ರ ಅವರ ಜೊತೆಗೆ ಕೂಡಿದ ಕ್ಲೀವರ್ 10 ಎಸೆತಗಳನ್ನು ಎದುರಿಸಿ ಕೇವಲ 1 ರನ್ ಗಳಿಸಿದ್ದಾಗ ಶಾರ್ದೂಲ ಠಾಕೂರ್ ಬೌಲಿಂಗ್ ನಲ್ಲಿ ಸ್ಲಿಪ್ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು.
ನಂತರ ರಚಿನ್ ರವೀಂದ್ರ ಅವರ ಜೊತೆಗೂಡಿದ ಮಾರ್ಕ್ ಚಾಪಮ್ಯಾನ್ ಅವರು ಮೈದಾನಕ್ಕೆ ಇಳಿಯಬೇಕೆನ್ನುವಷ್ಟರಲ್ಲಿಯೇ ಮತ್ತೆ ಮಳೆ ಆಗಮಿಸಿ ಪಂದ್ಯವನ್ನು ಸ್ಥಗಿತಗೊಳಿಸುವಂತೆ ಮಾಡಿತು. ಕೆಲ ಹೊತ್ತು ಪಂದ್ಯವನ್ನು ಸ್ಥಗಿತಗೊಳಿಸಿದರೂ ಮತ್ತೆ ಪಂದ್ಯ ಆರಂಭಿಸಬಹುದು ಎನ್ನುವ ನಿರೀಕ್ಷೆ ಹುಸಿಯಾಗಿ ಪಂದ್ಯವನ್ನು ಸ್ಥಗಿತಗೊಳಿಸಿ ಡ್ರಾ ಎಂದು ಘೋಷಣೆ ಮಾಡಲಾಯಿತು.
ಓದಿ:ಮಹಾರಾಜ ಟ್ರೋಫಿ ಫೈನಲ್.. ಚಾಂಪಿಯನ್ ಪಟ್ಟ ಮುಡಿಗೇರಿಸಿ ಕೊಂಡ ಗುಲ್ಬರ್ಗ ಮಿಸ್ಟಿಕ್ಸ್