ಹುಬ್ಬಳ್ಳಿ:ತಾಲೂಕಿನ ಇಂಗಳಹಳ್ಳಿ ಸಮೀಪ ನಿನ್ನೆ ಅನಿರೀಕ್ಷಿತವಾಗಿ ಪ್ರವಾಹೋಪಾದಿಯಲ್ಲಿ ಉಕ್ಕಿಬಂದ ಬೆಣ್ಣೆಹಳ್ಳ. ಈ ಪರಿಣಾಮವಾಗಿ ಹಳ್ಳದಲ್ಲಿ ಸಿಲುಕಿದ್ದ ಸುಮಾರು 32 ಜನರನ್ನು ತಾಲೂಕು ಆಡಳಿತ, ಪೊಲೀಸ್ ಹಾಗೂ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು, ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಓರ್ವ ಯುವಕ ನಾಪತ್ತೆಯಾಗಿದ್ದಾನೆ. ಪತ್ತೆ ಕಾರ್ಯಾಚರಣೆ ಮುಂದುವರೆದಿದೆ.
ನಿನ್ನೆ ಬೆಳಗ್ಗೆ ಹೊಲಕ್ಕೆ ತೆರಳಿ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಇಂಗಳಹಳ್ಳಿ ಗ್ರಾಮದ ಬಳಿ ಬೆಣ್ಣೆಹಳ್ಳ ತುಂಬಿ ಬಂದ ಪರಿಣಾಮ ಜಮೀನು ಮಾಲೀಕ ಸೇರಿ 28 ಕೃಷಿ ಕೂಲಿ ಕಾರ್ಮಿಕರು ಹಳ್ಳದಲ್ಲಿ ಸಿಲುಕಿದ್ದರು. ಘಟನೆ ತಿಳಿದ ತಕ್ಷಣವೇ ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ತಾಲೂಕು ಆಡಳಿತಕ್ಕೆ ಸೂಚನೆ ನೀಡಿ, ರಕ್ಷಣೆ ಕಾರ್ಯಾಚರಣೆಗೆ ಏರ್ಪಾಡು ಮಾಡಿದರು.
ತಹಶೀಲ್ದಾರ್ ಪ್ರಕಾಶ ನಾಶಿ, ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಗೋಕಾಕ್ ಹಾಗೂ ಅಗ್ನಿಶಾಮಕ ಹಾಗೂ ತುರ್ತುಸೇವೆಗಳ ಇಲಾಖೆ ಅಧಿಕಾರಿ ವಿನಾಯಕ ಹಟ್ಟಿಕಾರ ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದೊಂದಿಗೆ, ಎಲ್ಲ 28 ಕೂಲಿ ಕಾರ್ಮಿಕರನ್ನು ಬೋಟ್ ಮೂಲಕ ರಕ್ಷಣೆ ಮಾಡಿ ಹೊರತಂದರು.