ಹುಬ್ಬಳ್ಳಿ (ಧಾರವಾಡ): ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳಾಗುತ್ತಿದ್ದು ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಹಿನ್ನೆಲೆ ಎಲ್ಲೆಡೆ ರಾಷ್ಟ್ರ ಧ್ವಜ ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಈಗಾಗಲೇ ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಕಾಯ್ದೆಗೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿದ್ದು, ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಸ್ಥೆ ಕಾರ್ಯದರ್ಶಿ ಶಿವಾನಂದ ಮಠಪತಿ ಅವರು ಆತಂಕ ವ್ಯಕ್ತಪಡಿಸಿದರು.
ಆತಂಕ..ಹುಬ್ಬಳ್ಳಿ ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿ ರಾಷ್ಟ್ರ ಧ್ವಜ ತಯಾರಾಗುತ್ತದೆ. ರಾಷ್ಟ್ರ ಧ್ವಜವನ್ನು ಖಾದಿ ಬಟ್ಟೆಯಲ್ಲಿ ನೋಡುವುದೇ ಚೆಂದ. ಆದರೆ ಫ್ಲ್ಯಾಗ್ ಕೋಡ್ ಆಫ್ ಇಂಡಿಯಾ 2002 ಕಾಯ್ದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿ ಪಾಲಿಸ್ಟರ್ ಬಟ್ಟೆಗಳಿಂದ ರಾಷ್ಟ್ರ ಧ್ವಜವನ್ನ ತಯಾರು ಮಾಡಬಹುದು. ಅಷ್ಟೇ ಅಲ್ಲದೇ ಮಶೀನ್ಗಳ ಮೂಲಕ ಧ್ವಜ ತಯಾರಿಸಬಹುದೆಂದು ತಿದ್ದುಪಡಿ ತಂದಿದೆ. ಈ ಮೂಲಕ ಬಟ್ಟೆ ಮಿಲ್ಗಳಲ್ಲಿ ಖಾಸಗಿ ಕಂಪನಿಯವರು ರಾಷ್ಟ್ರ ಧ್ವಜ ತಯಾರಿ ಮಾಡಬಹುದಾಗಿದೆ. ಇದರಿಂದ ರಾಷ್ಟ್ರ ಧ್ವಜದ ಗೌರವ, ಮಹತ್ವ ಕಡಿಮೆ ಆಗುತ್ತಿದೆ ಎಂದು ಖಾದಿ ಸಂಸ್ಥೆ ಆತಂಕ ವ್ಯಕ್ತಪಡಿಸಿದೆ.
ದೇಶಾದ್ಯಂತ ಪೂರೈಕೆಯಾಗುತ್ತಿತ್ತು ಬೆಂಗೇರಿಯ ಖಾದಿ ಧ್ವಜ.. ದೇಶದ ಮೂಲೆ ಮೂಲೆಗೂ ಬೆಂಗೇರಿ ಖಾದಿ ಕೇಂದ್ರದಿಂದಲೇ ರಾಷ್ಟ್ರ ಧ್ವಜ ಪೂರೈಕೆ ಆಗುತ್ತಿತ್ತು. ಕೇಂದ್ರ ಸರ್ಕಾರ ಕಾಯ್ದೆಯಲ್ಲಿ ತಿದ್ದುಪಡಿ ತಂದಿದ್ದರಿಂದ ಈ ರಾಷ್ಟ್ರದ್ವಜ ತಯಾರಿಕಾ ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ. ಇದೊಂದು ವ್ಯವಹಾರದ ವಿಷಯವಲ್ಲ. ದೇಶಾಭಿಮಾನದ ಸಂಕೇತ. ವಿದೇಶಾಂಗ ರಾಯಭಾರಿ ಕಚೇರಿಗಳಲ್ಲಿಯೂ ಬೆಂಗೇರಿಯಲ್ಲಿ ತಯಾರಿಸಿದ ರಾಷ್ಟ್ರ ಧ್ವಜ ಹಾರಾಟವಾಗುತ್ತಿತ್ತು. ಆದರೆ ಈಗ ಎಲ್ಲವೂ ಬದಲಾಗುತ್ತಿದೆ ಎಂದಿದ್ದಾರೆ.