ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವದ ಯೋಜನೆಯಲ್ಲಿ ಒಂದಾಗಿರುವ ಫ್ಲೈಓವರ್ ನಿರ್ಮಾಣ ಕಾಮಗಾರಿಗೆ ಬಸವ ವನದಲ್ಲಿರುವ ಬಸವೇಶ್ವರರ ಪುತ್ಥಳಿಯನ್ನು ಕಳೆದ ರಾತ್ರಿ ತೆರವು ಮಾಡಲಾಯಿತು. ಇದಕ್ಕಾಗಿಸಾಕಷ್ಟು ಬಾರಿ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು ತಾಂತ್ರಿಕ ಉಪಕರಣಗಳ ಮೂಲಕ ತೆರವು ಕಾರ್ಯ ನಡೆಯಿತು. ಫ್ಲೈಓವರ್ ಕೆಲಸ ಪೂರ್ಣಗೊಂಡ ನಂತರ ಮತ್ತೆ ಮೂರ್ತಿಯನ್ನು ಮರು ಸ್ಥಾಪಿಸುವ ಭರವಸೆಯನ್ನು ಜನಪ್ರತಿನಿಧಿಗಳು ನೀಡಿದ್ದಾರೆ. ಸಂಘಟನೆಗಳು ಕೂಡ ಪುತ್ಥಳಿ ತೆರವಿಗೆ ಒಪ್ಪಿಗೆ ನೀಡಿದ್ದವು. ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದ ಹತ್ತಿರ ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿದೆ.
ಈ ಹಿಂದೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಥಳಕ್ಕೆ ಭೇಟಿ ನೀಡಿ ಬಸವಣ್ಣನ ಪುತ್ಥಳಿ ತೆರವು ಕುರಿತು ವಿವಿಧ ಸಂಘಟನೆ ಮತ್ತು ನಾಗರೀಕರ ಜೊತೆ ಸಮಾಲೋಚನೆ ನಡೆಸಿದ್ದರು. ಇದಾದ ಬಳಿಕ ಎಲ್ಲರ ಒಪ್ಪಿಗೆಯ ಮೇರೆಗೆ ನಗರದ ಹೃದಯ ಭಾಗದಲ್ಲಿರುವ ಬಸವ ವನದಲ್ಲಿರುವ ಪುತ್ಥಳಿ ಸ್ಥಳಾಂತರಕ್ಕೆ ಸಿದ್ಧತೆ ನಡೆಸಲಾಗಿತ್ತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಶೆಟ್ಟರ್, "ನಗರದ ಫ್ಲೈಓವರ್ ಕಾಮಗಾರಿ ಆರಂಭಗೊಂಡಿದೆ. ಯೋಜನೆ ಪ್ರಕಾರ ಬಸವ ವನದ ಹತ್ತಿರದ ಫ್ಲೈಓವರ್, ಮೂರ್ತಿಗೆ ಹೊಂದಿಕೊಂಡು ಬರುವ ಕಾರಣ ಪುತ್ಥಳಿ ಸ್ಥಳಾಂತರ ಮಾಡುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ಮಾಡಿ ಸ್ಥಳೀಯರ ಹಾಗೂ ಸಂಘಟನೆಗಳ ಸಹಕಾರದೊಂದಿಗೆ ಮೂರ್ತಿಯನ್ನು ಸ್ಥಳಾಂತರ ಮಾಡಲಾಗುತ್ತದೆ. ಈಗಾಗಲೇ ಸಾರ್ವಜನಿಕರ ಅಭಿಪ್ರಾಯ ಹಾಗೂ ಸಮಾಜದವರ ಸಲಹೆ ಮೇರೆಗೆ ಸೂಚಿಸಿದ ಸ್ಥಳದಲ್ಲಿ ಸ್ಥಾಪಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಮೂರ್ತಿಗೆ ಯಾವುದೇ ರೀತಿಯ ಧಕ್ಕೆಯಾಗದಂತೆ ಸೂಕ್ತ ತಂತ್ರಜ್ಞಾನದ ಮೂಲಕ ಸ್ಥಳಾಂತರ ಕಾರ್ಯ ಮಾಡಲಾಗುತ್ತದೆ" ಎಂದು ಭರವಸೆ ನೀಡಿದ್ದರು.