ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಬಸವರಾಜ ಕೊರವರ ಮನೆಗೆ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ನೀಡಿ ಶಾಸಕ ಅಮೃತ್ ದೇಸಾಯಿ ಹಾಗೂ ಕೊರವರ ನಡುವೆ ಸಂಧಾನ ಮಾತುಕತೆ ನಡೆಸಿದರು.
ಕಳೆದ ಚುನಾವಣೆಯಲ್ಲಿ ಬಸವರಾಜ ಕೊರವರ ಶಾಸಕ ಅಮೃತ ದೇಸಾಯಿ ಪರವಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಶಾಸಕರೊಂದಿಗೆ ಮನಸ್ತಾಪ ಉಂಟಾಗಿ ದೂರ ಉಳಿದಿದ್ದರು. ಈ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಬಸವರಾಜ್ ಕೊರವರ ಅವರನ್ನು ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಿ ಇಬ್ಬರ ನಡುವೆ ಸಂಧಾನ ಮಾಡಿಸಿದ್ದಾರೆ.
ಸಂಧಾನ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್ ಜೋಶಿ, ಸಾಮಾಜಿಕ ಹೋರಾಟಗಾರರಾದ ಬಸವರಾಜ ಕೊರವರ ಅವರು ತಮ್ಮ ನಾಮಪತ್ರ ಹಿಂಪಡೆಯುತ್ತಾರೆ. ಅವರು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿಯವರನ್ನು ಬೆಂಬಲಿಸಲಿದ್ದಾರೆ. ಅವರಿಬ್ಬರೂ ಹಳೆಯ ಸ್ನೇಹಿತರು. ಇಬ್ಬರ ನಡುವೆ ಏನೋ ಸ್ವಲ್ಪ ಮನಸ್ತಾಪ ಉಂಟಾಗಿತ್ತು. ಅದೆಲ್ಲವೂ ಈಗ ನಿವಾರಣೆಯಾಗಿದೆ. ಯಾವುದೇ ಷರತ್ತುಗಳಿಲ್ಲದೇ ನಾಮಪತ್ರ ವಾಪಸ್ ಪಡೆಯುತ್ತಿದ್ದಾರೆ ಎಂದರು.
ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಾತನಾಡಿ, ಅಮೃತ ದೇಸಾಯಿ ಹಾಗೂ ನನ್ನ ನಡುವೆ ಕೆಲವೊಂದು ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಅವರಿಂದ ಸ್ವಲ್ಪ ದೂರ ಉಳಿದಿದ್ದೆ. ನಾನು ಹಿಂದೆ ಬಿಜೆಪಿ ಪಕ್ಷದ ಬೆಂಬಲಿಗನಾಗಿದ್ದೆ. ಮುಂದೆಯೂ ಬಿಜೆಪಿಗೆ ಬೆಂಬಲಿಗನಾಗಿರುತ್ತೇನೆ. ಹಿಂದೆ ನಮ್ಮ ಬೆಂಬಲಿಗರು ಮತ್ತು ಹಿರಿಯರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಇದೀಗ ಅವರೇ ನಾಮಪತ್ರವನ್ನು ವಾಪಸ್ ಪಡೆಯುವಂತೆ ಹೇಳಿದ್ದಾರೆ. ಹಿರಿಯ ನಾಯಕರು ಹೇಳಿದಂತೆ ನನ್ನ ನಾಮಪತ್ರವನ್ನು ನಾನು ಹಿಂಪಡೆಯುತ್ತೇನೆ ಎಂದು ಕೊರವರ ಹೇಳಿದ್ರು.