ಹುಬ್ಬಳ್ಳಿ: ಎಥಿಕ್ಸ್ ಮೇಲೆ ಚುನಾವಣೆ ನಡೆಯುತ್ತಿಲ್ಲ. ಜನಪರ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಇದು ಹೀಗೆಯೇ ನಡೆಯುತ್ತದೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಲ್ಯಾಮಿಂಗ್ಟನ್ ಹೈಸ್ಕೂಲಿನಲ್ಲಿ ಮತ ಚಲಾವಣೆ ಬಳಿಕ ಮಾತನಾಡಿದರು, ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು. ಕೊರೊನಾ ಭೀತಿ ಇರುವುದರಿಂದ ಮಾಸ್ಕ್ ಹಾಕದೇ ಇರುವವರಿಗೆ ಮತ ಹಾಕಲು ಅವಕಾಶ ಕೊಡಬಾರದು ಎಂದರು.
ಮತ ಚಲಾಯಿಸಿದ ಬಳಿಕೆ ಮಾತನಾಡಿದ ಬಸವರಾಜ ಹೊರಟ್ಟಿ ಜೋಶಿ ಪುತ್ರಿ ಮದುವೆಯಲ್ಲಿ ಕೋವಿಡ್ ರೂಲ್ಸ್ ಬ್ರೇಕ್ ಮಾಡಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸದನದಲ್ಲಿ ಈ ಬಗ್ಗೆ ಯಾರಾದರೂ ಪ್ರಶ್ನೆ ಮಾಡಿದರೆ. ನಾನು ಸಹ ಈ ಬಗ್ಗೆ ಧ್ವನಿ ಎತ್ತುತ್ತೇನೆ. ಡಿಸಿಗಳು ದಕ್ಷತೆಯಿಂದ ಕೆಲಸ ಮಾಡಬೇಕು ಎಂದರು.
ಇನ್ನು ಮನೆ ಕೊಡುವ ವಿಚಾರವಾಗಿ 8 ನೇ ಪತ್ರವನ್ನು ಇಂದು ನಾನು ಬರೆಯುತ್ತೇನೆ. ಭಿಕ್ಷೆ ಬೇಡುತ್ತಿಲ್ಲ, ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕುರಿತು ಕೇಳುವುದಿಲ್ಲ. ಇದು ಸರ್ಕಾರಕ್ಕೆ ನನ್ನ ಕೊನೆಯ ಪತ್ರ ಎಂದರು.
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಮಾಹಿತಿ:
ಚುನಾವಣೆ ಹಿನ್ನೆಲೆ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭಗೊಂಡಿದೆ. ಒಟ್ಟು 82 ವಾರ್ಡ್‌ಗಳಿಗೆ ಇಂದು ಮತದಾನ ನಡೆಯಲಿದ್ದು, 420 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಲಿದೆ. ಪಾಲಿಕೆ ವ್ಯಾಪ್ತಿಯ ಒಟ್ಟು 842 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದ್ದು, 4,06,280 ಪುರುಷ, 4,11,092 ಮಹಿಳೆಯರು ಸೇರಿ ಒಟ್ಟು 8,17,458 ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮತದಾನ ಹಿನ್ನೆಲೆ ಅವಳಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮತಗಟ್ಟೆ ಹಾಗೂ ಹೊರಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 175 ಎಎಸ್‌ಐ, 92 ಹೆಡ್ ಕಾನ್ಸ್ಟೇಬಲ್, 837 ಕಾನ್ಸ್ಟೇಬಲ್, 382 ಹೋಮ್ ಗಾರ್ಡ್ಸ್ ಅನ್ನು ಮತಗಟ್ಟೆಗಳಿಗೆ ನಿಯೋಜಿಸಲಾಗಿದೆ. 25 ಪಿಎಸ್‌ಐ, 24 ಎಎಸ್‌ಐ, 49 ಹೆಡ್ ಕಾನ್ಸ್ಟೇಬಲ್, 49 ಮಂದಿ ಕಾನ್ಸ್ಟೇಬಲ್ ಮತಗಟ್ಟೆ ಸುತ್ತ ಗಸ್ತು ತಿರುಗಲು ನಿಯೋಜನೆ ಮಾಡಲಾಗಿದೆ.
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಸಕಲ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದು, ಮತದಾರರು ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.