ಧಾರವಾಡ: ಶಿಕ್ಷಕರ ಕ್ಷೇತ್ರದ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದಾರೆ.
ಶಿಕ್ಷಣ ಕ್ಷೇತ್ರದ ಸಮಸ್ಯೆ ಬಗೆಹರಿಸದಿದ್ದರೆ ಅಮರಣಾಂತ ಉಪವಾಸ: ಹೊರಟ್ಟಿ - Basavaraja Horatti
ನಮ್ಮ ಬೇಡಿಕೆಗಳು ಈಡೇರದಿದ್ದರೆ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ನಾವು ಸಿದ್ದರಿದ್ದೇವೆ ಎಂದು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿರುವ ಬಸವರಾಜ್ ಹೊರಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹನಿರತರಾಗಿ ಮಾತನಾಡಿದ ಅವರು, ಕಳೆದ ನಾಲ್ಕೈದು ವರ್ಷಗಳಿಂದ ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸಿದ್ದರಾಮಯ್ಯ ಕಾಲದಿಂದ ಹೋರಾಟ ನಡೆಯುತ್ತಿದೆ. ಪದವೀಧರ, ಶಿಕ್ಷಕ ಕ್ಷೇತ್ರದ ಚುನಾವಣೆ ಬಂದಾಗ ಸಮಸ್ಯೆ ಈಡೇರಿಸುವ ಭರವಸೆ ನೀಡಿದ್ದರು. ದಿನಕ್ಕೊಂದು ಕಾನೂನು ತಂದು ಶಾಲೆಗಳನ್ನೂ ಸಹ ಬಂದ್ ಮಾಡುತ್ತಿದ್ದಾರೆ. ಇದೀಗ ನಗರದ ಪೊಲೀಸ್ ವಸತಿ ಶಾಲೆ ಬಂದ್ ಮಾಡಲು ಹೊರಟಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಸ್ಥಿತಿ ಬಹಳ ಗಂಭೀರವಾಗಿದೆ. ಡಿಸೆಂಬರ್ 15 ರವರೆಗೆ ಗಡುವು ಕೊಟ್ಟಿದ್ದೇವೆ. ರಾಜ್ಯದ 17 ಜಿಲ್ಲೆಗಳಿಂದ ಹೋರಾಟಕ್ಕೆ ಬಂದಿದ್ದಾರೆ. ದಿನಕ್ಕೆ ನಾಲ್ಕು ಜನ ಉಪವಾಸ ಕೂರುತ್ತಾರೆ ಎಂದು ಹೊರಟ್ಟಿ ತಿಳಿಸಿದರು.