ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ್ತೆ ಬಸವರಾಜ ಹೊರಟ್ಟಿ ವೈಯಕ್ತಿಕ ವರ್ಚಸ್ಸಿನಿಂದ ಗೆದ್ದು ದಾಖಲೆಯ ಜಯ ಸಾಧಿಸಿದ್ದಾರೆ. ಪ್ರಮುಖ ಮೂರು ಪಕ್ಷಗಳು, ಪಕ್ಷೇತರರು ಸೇರಿದಂತೆ ಏಳು ಅಭ್ಯರ್ಥಿಗಳು ಕಣದಲ್ಲಿದ್ದರು. ಬಿಜೆಪಿ-ಕಾಂಗ್ರೆಸ್ ನಡುವಿನ ಸಮರ ಪ್ರಮುಖವಾಗಿದ್ದರೂ, ಇದರಲ್ಲಿ ಗೆಲುವು ಯಾರದ್ದು ಎಂಬ ನಿರೀಕ್ಷೆ ಹೆಚ್ಚಿತ್ತು. ಹೊರಟ್ಟಿ ಅವರು ಕಳೆದ ಎಲ್ಲಾ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದಿಂದ ಗೆದ್ದು ಬಂದಿದ್ದರು. ಆದ್ರೆ, ಈ ಬಾರಿ ಅವರು ಬಿಜೆಪಿ ಸೇರ್ಪಡೆಯಾಗುವ ಮೂಲಕ ಹಲವರ ವಿರೋಧದ ನಡುವೇ ಅಭ್ಯರ್ಥಿಯಾಗಿದ್ದರು.
ಹೊರಟ್ಟಿಯವರಿಗೆ ವ್ಯಕ್ತಿ ಕೇಂದ್ರಿಕೃತವಾಗಿ ಟೀಕೆ-ಆರೋಪಗಳು ಕೇಳಿ ಬಂದವು. ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳು, ಪಕ್ಷಗಳ ನಾಯಕರು ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರನ್ನೇ ಕೇಂದ್ರವಾಗಿಸಿಕೊಂಡು ಆರೋಪಗಳ ಸುರಿಮಳೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಹೊರಟ್ಟಿ ಹಾಗೂ ಬಿಜೆಪಿ ನಾಯಕರು ಉತ್ತರ ನೀಡಲು ಈ ಚುನಾವಣೆ ವೇದಿಕೆಯಾಗಿತ್ತು. ಆದರೆ, ಇಲ್ಲಿ ಪಕ್ಷದ ವರ್ಚಸ್ಸಿಗಿಂತ ಹೊರಟ್ಟಿ ಅವರು ದಾಖಲೆಯ ಗೆಲುವಿಗೆ ವೈಯಕ್ತಿಕ ವರ್ಚಸ್ಸು ಕಾರಣವಾಗಿದೆ.
ಇನ್ನು ಜಾತ್ಯಾತೀತ ಜನತಾದಳಲ್ಲಿದ್ದಾಗ ಸಹ ಬಸವರಾಜ ಹೊರಟ್ಟಿ ಅವರು ಪಕ್ಷದ ವೇದಿಕೆ ಬಳಸಿಕೊಳ್ಳದೇ ಜಯ ಸಾಧಿಸುತಿದ್ದರು. ಈಗ ಸತತ 8ನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ವಿಧಾನ ಪರಿಷತ್ ಚುನಾವಣೆಯಲ್ಲಿ ದಾಖಲೆಯನ್ನು ನಿರ್ಮಿಸಿದ್ದಾರೆ. ಬೆಳಗಾವಿ, ಧಾರವಾಡ, ಹಾವೇರಿ, ಗದಗ 4 ಜಿಲ್ಲೆಗಳನ್ನು ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 11,000ನಲ್ಲಿ 7070 ಮತಗಳನ್ನು ಗಳಿಸಿದ್ದಾರೆ ಬಸವರಾಜ ಹೊರಟ್ಟಿ.
ದಾಖಲೆ ಸರದಾರನ ಗೆಲುವಿನ ಹಿಂದಿದೆ ಅಚ್ಚರಿಯ ಮಾಹಿತಿ :ಬಸವರಾಜ ಹೊರಟ್ಟಿ ಬಿಜೆಪಿಗೆ ಸೇರ್ಪಡೆಯಾದ ಬಳಿಕ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಪಶ್ಚಿಮ ಶಿಕ್ಷಕರ ಪಧವೀಧರರ ಕ್ಷೇತ್ರದ ರಣಕಣದ ಫಲಿತಾಂಶದಲ್ಲಿ ಕೊನೆಗೂ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ 9266 ಮತ ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ 4597 ಮತ ಪಡೆದರೆ, ಜೆಡಿಎಸ್ನ ಶ್ರೀಶೈಲ ಗಡದಿನ್ನಿ 273, ಪಕ್ಷೇತರರಾದ ಎಂ.ಪಿ. ಕರಬಸಪ್ಪ 60, ಕೃಷ್ಣವಾಣಿ 58, ಪ್ರೊ. ಎಫ್.ವಿ. ಕಲ್ಲನಗೌಡರ 27, ವೆಂಕನಗೌಡ ಗೋವಿಂದಗೌಡರ 79 ಮತ ಪಡೆದಿದ್ದಾರೆ.
ಈ ಬಾರಿಯ ಚುನಾವಣೆ ಗೆಲ್ಲುವ ಮೂಲಕ ಬಸವರಾಜ ಹೊರಟ್ಟಿ ಮತ್ತೊಂದು ದಾಖಲೆ ಮಾಡಿದ್ದಾರೆ. ಪರಿಷತ್ ಚುನಾವಣೆಯಲ್ಲಿ 8 ಬಾರಿಗೆ ಈ ವರೆಗೂ ಯಾರೊಬ್ಬರೂ ಗೆಲುವು ಕಂಡಿಲ್ಲ. ಈ ಮೂಲಕ ಬಸವರಾಜ ಹೊರಟ್ಟಿ ಪರಿಷತ್ ಪ್ರವೇಶಿಸಿ ವಿಶ್ವದಾಖಲೆ ಬರೆದು, ಸೋಲಿಲ್ಲದ ಸರದಾರ ಎನ್ನಿಸಿಕೊಂಡಿದ್ದಾರೆ. ಇದರ ಜತೆಗೆ ಅಂಬಾಸೆಡರ್ ಕಾರ್ ಬಸವರಾಜ ಹೊರಟ್ಟಿಯವರಿಗೆ ಅದೃಷ್ಟದ ಕಾರ್ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.