ಹುಬ್ಬಳ್ಳಿ: ಹಿಂದಿನ ಮೂರು ಸರ್ಕಾರಕ್ಕೆ ಕುರುಬರ ಸಹಕಾರ ಇತ್ತು. ಈಗ ಕೂಡ ಬಿಜೆಪಿ ಸರ್ಕಾರವನ್ನು ಗಟ್ಟಿಗೊಳಿಸಲು ಕುರುಬರ ಸಹಕಾರವೇ ಕಾರಣವಾಗಿದೆ. ಹೀಗಾಗಿ ಸಚಿವ ಸಂಪುಟದಲ್ಲಿ ಮೂವರು ಕುರುಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂದು ಮನಸೂರು ಮಠದ ಬಸವರಾಜ ದೇವರು ಒತ್ತಾಯಿಸಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ರಚನೆಯಲ್ಲಿ ಕುರುಬ ಶಾಸಕರ ಸಹಕಾರ ಮಹತ್ವವಾಗಿದೆ. ಎಂಟಿಬಿ ನಾಗರಾಜ್ ಸಚಿವ ಸ್ಥಾನ ತ್ಯಾಗ ಮಾಡಿ ಪಕ್ಷ ಸೇರಿದ್ದಾರೆ. ಅಲ್ಲದೇ ಹೆಚ್.ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷರಿದ್ದವರು, ಹಿರಿಯ ಮುಖಂಡರು. ಆರ್. ಶಂಕರ್ಗೆ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಇವರಿಗೆ ಸಚಿವ ಸ್ಥಾನ ಕೊಡದೆ ಇದ್ದರೆ ಸರ್ಕಾರಕ್ಕೆ ತೊಂದರೆ ಆಗುತ್ತದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಅವರಿಗೆ ಕುರುಬರು ಬೆಂಬಲಿಸಿದ್ದಕ್ಕೆ ಸರ್ಕಾರ ಬಂತು. ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಬರಲು ಕುರಬರೇ ಕಾರಣ. ಬಿಜೆಪಿ ಸರ್ಕಾರಕ್ಕೆ ಬಹುಮತ ಇರಲಿಲ್ಲ. ನಮ್ಮ ನಾಯಕರು ಹೋಗಿ ಸರ್ಕಾರ ಗಟ್ಟಿಗೊಳಿಸಿದ್ದಾರೆ ಎಂದರು.
ಮೀಸಲಾತಿ ಯಾರಪ್ಪನ ಆಸ್ತಿ ಅಲ್ಲ:
ಮಿಸಲಾತಿ ವಿಚಾರದಲ್ಲಿ ನಾವು ಭಿಕ್ಷುಕರಲ್ಲ, ಅದು ನಮ್ಮ ಹಕ್ಕು. ಮೀಸಲಾತಿ ಪಡೆದೇ ತೀರುತ್ತೇವೆ. ಆದರೆ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆನ್ನುವ ಹೋರಾಟದಲ್ಲಿ ಕತ್ತೆ, ಕುದುರೆ, ಕುರಿ, ತೋಳ ಎಂಬ ಮಾತು ಬಳಕೆಯಾಗುತ್ತಿವೆ. ಕಚ್ಚಾಟ, ವೈಯಕ್ತಿಕ ಪ್ರತಿಷ್ಠೆ ಮತ್ತು ಪ್ರಚಾರ, ಟೀಕೆ ಟಿಪ್ಪಣಿಗಳನ್ನು ಬಿಟ್ಟು ಮೀಸಲಾತಿ ಹೋರಾಟ ನಡೆಸಲಿ. ಕುರಿ, ತೋಳಕ್ಕೆ ಬಲಿಯಾಗಬಾರದು ಎಂದರು.
ಓದಿ: ಭೈರಪ್ಪನವರು ದೆಹಲಿಗೆ ಹೋಗಿ ರೈತರ ಕಷ್ಟ ನೋಡಲಿ : ಕುರುಬೂರು ಶಾಂತಕುಮಾರ್
ನಾವೆಲ್ಲರೂ ಒಗ್ಗಟ್ಟಾಗಿ ಮೀಸಲಾತಿ ಪಡೆಯಬೇಕು. ಮೀಸಲಾತಿ ಹೋರಾಟ ಪ್ರಾಮಾಣಿಕವಾಗಿ ನಡೆಯಬೇಕು. ಮೀಸಲಾತಿ ಹೋರಾಟದಲ್ಲಿ ಮುಖ್ಯಮಂತ್ರಿ ಯಾರು ಆಗಬೇಕೆಂದು ಚರ್ಚೆಯಾಗಬಾರದು. ಸಿದ್ದರಾಮಯ್ಯನವರು ಹೋರಾಟಕ್ಕೆ ಪಕ್ಷ ಭೇದ ಮರೆತು ಬರಬೇಕು. ಮೀಸಲಾತಿ ವಿಚಾರವಾಗಿ ಸಿದ್ದರಾಮಯ್ಯನವರು ಸದಾ ಧ್ವನಿ ಎತ್ತಿದ್ದಾರೆ. ಈಗ ಅವರು ಮುನ್ನೆಲೆಗೆ ಬರುವ ಮೂಲಕ ಮೀಸಲಾತಿ ಹೋರಾಟಕ್ಕೆ ಗಟ್ಟಿ ಧ್ವನಿಯಾಗಿ ನಿಲ್ಲಬೇಕು. ಕೇವಲ ಈಶ್ವರನವರು ಅಷ್ಟೇ ಅಲ್ಲ, ನಮ್ಮ ಸಮುದಾಯದ ಬೆಂಬಲ ತೆಗೆದುಕೊಂಡು ಗೆದ್ದು ಬಂದುವರು ವಿಧಾನಸಭೆ ಒಳಗೆ ಮತ್ತು ಹೊರಗೆ ಮೀಸಲಾತಿ ಕುರಿತು ಹೋರಾಟ ನಡೆಸಬೇಕು ಎಂದರು.