ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಹುಬ್ಬಳ್ಳಿ:ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತದೆ ಎನ್ನುವುದು ಗೊತ್ತಿದೆ. ಅವರಿಗೆ ಅಧಿಕಾರ ಇದೆ, ಏನ್ ಮಾಡ್ತಾರೆ ನೊಡೋಣ. ಆದರೆ ಸಾರ್ವತ್ರಿಕವಾಗಿ ಜನಸಮುದಾಯಕ್ಕೆ ಅನ್ಯಾಯವಾದರೆ ನಾವು ಹೋರಾಟ ಮಾಡುತ್ತೇವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯ ನಿವಾಸದಲ್ಲಿಂದು ಮಾತನಾಡಿದ ಅವರು, ಸಾರ್ವಜನಿಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಏನೇ ಅನ್ಯಾಯ ಆದರೂ ನಾವು ಹೋರಾಟ ಮಾಡಲು ಸಿದ್ಧ ಎಂದರು. ಪಠ್ಯ ಪುಸ್ತಕ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ಮಾಡುತ್ತದೆ. ಸಾರ್ವಜನಿಕರಿಗೆ ಅನ್ಯಾಯವಾದರೆ ಕಾನೂನಾತ್ಮಕವಾಗಿ, ರಾಜಕೀಯವಾಗಿ ನಾವು ಹೋರಾಟ ಮಾಡುತ್ತೇವೆ.
ಅಧಿಕಾರ ಸಿಕ್ಕಾಗ ಸ್ವೇಚ್ಛಾಚಾರದಿಂದ ಎಲ್ಲವನ್ನೂ ಬದಲಾವಣೆ ಮಾಡುತ್ತೇವೆ ಎನ್ನುವುದು ದುರಾಹಂಕಾರದ ಮಾತು. ಇದು ರಿವರ್ಸ್ ಗೇರ್ ಸರ್ಕಾರ. ಅವರ ಗ್ಯಾರಂಟಿಯಲ್ಲೂ ರೀವರ್ಸ್ ಹೋಗ್ತಿದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರಿವರ್ಸ್ ಹೋಗ್ತಿದಾರೆ. ಇದರ ಪರಿಣಾಮ ಜನರಿಗೆ ಕೂಡಲೇ ಗೊತ್ತಾಗಿದೆ. ಇಷ್ಟು ಬೇಗ ಸರ್ಕಾರ, ಸೇಡಿನ ಕ್ರಮ ಆಗ್ತಿದೆ. ರೀವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ, ಇದು ಸೇಡಿನ ಕ್ರಮ ಎಂದು ಹರಿಹಾಯ್ದರು.
ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ-ಬೊಮ್ಮಾಯಿ: ವಿಧಾನಸೌಧದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದ್ದು, ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದರು. ಮಂಗಳವಾರ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಸಿಎಂ ಹಾಗೂ ಡಿಸಿಎಂ ಪೊಲೀಸರಿಗೆ ಎಚ್ಚರಿಕೆ ನೀಡುವ ಹೇಳಿಕೆ ನೀಡಿದ್ದಾರೆ.
ಕೇಸರೀಕರಣ ಮಾಡುವ ಅವಕಾಶ ಕೊಡಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕ ಪೊಲೀಸ್ ಉತ್ತಮ ಹೆಸರು ಮಾಡಿದೆ. ಆದರೆ ಇವರು ಪೊಲೀಸ್ ಇಲಾಖೆಯ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ನಮ್ಮ ಪೊಲೀಸರು ಯಾವತ್ತೂ ಕೇಸರೀಕರಣ ಮಾಡಿಲ್ಲ. ಅವರ ಅಜೆಂಡಾ ಜಾರಿ ಮಾಡಲು ಈ ರೀತಿ ತೀರ್ಮಾನ ಮಾಡಿದ್ದಾರೆ. ತುಷ್ಟೀಕರಣ ರಾಜಕಾರಣ ಮಾಡಲು ಮೊದಲ ದಿನದಿಂದಲೇ ಕಾಂಗ್ರೆಸ್ ಮುಂದಾಗಿದೆ ಎಂದು ಬೊಮ್ಮಾಯಿ ಆರೋಪಿಸಿದ್ದಾರೆ.
ಮೊನ್ನೆ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಧರ್ಮಾತೀತವಾಗಿ ಪೊಲೀಸರು ಕಾರ್ಯ ನಿರ್ವಹಿಸಬೇಕು. ರಾಜ್ಯದಲ್ಲಿ ಇನ್ನು ನೈತಿಕ ಪೊಲೀಸ್ಗಿರಿಗೆ ಅವಕಾಶವಿಲ್ಲ. ಪೊಲೀಸರು ಜನಸ್ನೇಹಿಯಾಗಿದ್ದು, ದೂರು ನೀಡಲು ಬಂದವರ ಜೊತೆ ಸೌಜನ್ಯವಾಗಿ ನಡೆದುಕೊಳ್ಳಬೇಕು. ಜನರು ಕೆಲವೊಂದು ನಿರೀಕ್ಷೆ ಇಟ್ಟುಕೊಂಡು ಈ ಬಾರಿ ಬಹುಮತ ನೀಡುವ ಮೂಲಕ ನಮ್ಮ ಸರ್ಕಾರ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಯನ್ನು ನಾವು ಈಡೇರಿಸಬೇಕಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ:ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ರಾಜೀನಾಮೆ