ಹುಬ್ಬಳ್ಳಿ: ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಧಾರವಾಡ ಜಿಲ್ಲಾಡಳಿತ ಹಾಗೂ ಎಫ್ಐಸಿಸಿಐ ಸಹಯೋಗದಲ್ಲಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
ಕರ್ನಾಟಕ ಎಫ್‌ಎಂಸಿಜಿ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ, ಶೇ 15ರಷ್ಟು ಮಾತ್ರ ದಿನಬಳಕೆ ವಸ್ತುಗಳಿಲ್ಲಿ ಉತ್ಪಾದನೆಯಾಗುತ್ತಿದೆ. ಈ ನಿಟ್ಟಿನಲ್ಲಿ ಶೇ 85ರಷ್ಟು ವಸ್ತುಗಳನ್ನು ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಧಾರವಾಡದಲ್ಲಿ ಕೈಗಾರಿಕೆ ಸ್ಥಾಪಿಸುವ ಕಂಪನಿಗಳು ಐದು ವರ್ಷಗಳಲ್ಲಿ ಎಷ್ಟು ವ್ಯವಹಾರ ನಡೆಸುತ್ತವೋ, ಅಷ್ಟು ಸಬ್ಸಿಡಿ ಪಡೆಯುವ ಮೂಲಕ ಕೈಗಾರಿಕೋದ್ಯಮ ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ ಎಂದು ಸಿಎಂ ಹೇಳಿದರು.
ಇದನ್ನೂ ಓದಿ:ಬೆಂಗಳೂರು ಮಾದರಿಯಲ್ಲೇ ಹುಬ್ಬಳ್ಳಿ-ಧಾರವಾಡ ಅಭಿವೃದ್ಧಿ: ಮುರುಗೇಶ ನಿರಾಣಿ
ಎಷ್ಟು ಹೂಡಿಕೆ ಮಾಡುತ್ತೇವೆ ಅನ್ನೋದಕ್ಕಿಂತ, ಎಷ್ಟು ಜನರಿಗೆ ಕೆಲಸ ಕೊಟ್ಟಿದ್ದೇವೆ ಅನ್ನೋದು ಮುಖ್ಯ. ಆರ್ಥಿಕತೆ ಅಂದರೆ ಕೇವಲ ದುಡ್ಡಲ್ಲ, ದುಡಿಮೆಯೇ ನಿಜವಾದ ಆರ್ಥಿಕತೆ. ದುಡಿಮೆಯೇ ದೊಡ್ಡಪ್ಪ, ದುಡಿಮೆ ಇರುವ ದೇಶಕ್ಕೆ ಬಡತನ ಇರಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ಎಫ್‌ಎಮ್‌ಸಿಜಿಯ ಯಶಸ್ಸು ದೇಶದ ಆರ್ಥಿಕತೆಯನ್ನೇ ಬದಲಾಯಿಸಬಲ್ಲದು. ಏಳು ಲಕ್ಷ ಮನೆಗಳಿಗಿದ್ದ ನಳದ ಸಂಪರ್ಕ ಮೂರು ವರ್ಷಗಳಲ್ಲಿ ಐವತ್ತು ಲಕ್ಷಕ್ಕೆ ಏರಿಕೆಯಾಗಿದೆ. ಪ್ರಧಾನಿಗಳ ಸಮರ್ಥ ಕೆಲಸದಿಂದ ಕುಡಿಯುವ ನೀರು ಪ್ರತಿಯೊಂದು ಮನೆಗೆ ತಲುಪಿದೆ. ಭಾರತ ಬಲಿಷ್ಠ ಆಗಬೇಕು, ಪ್ರಧಾನಿಗಳ ಐದು ಟ್ರಿಲಿಯನ್ ಎಕಾನಮಿ ಕನಸು ನನಸಾಗಬೇಕು. 2025ರ ವೇಳೆಗೆ ಕರ್ನಾಟಕದಿಂದ ಒಂದು ಟ್ರಿಲಿಯನ್ ಎಕಾನಮಿ ಕಾಂಟ್ರಿಬ್ಯೂಷನ್ ನೀಡಲು ಪ್ರಯತ್ನಿಸುತ್ತಿದ್ದೇವೆ. ಹಲವಾರು ಕ್ಷೇತ್ರಗಳಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದೆ. ಬೇರೆ ಬೇರೆ ರಾಜ್ಯದವರು ಏನೇನೋ ಕ್ಲೇಮ್ ಮಾಡಿಕೊಳ್ಳುತ್ತಿರುತ್ತಾರೆ. ನಮ್ಮ ಕಾಂಪಿಟೇಷನ್ ಇರೋದು ಸಿಲಿಕಾನ್ ವ್ಯಾಲಿ ಜೊತೆಗೆ, ದೇಶದ ಇತರ ರಾಜ್ಯಗಳ ಜೊತೆಗಲ್ಲ ಎಂದರು.
ಎಫ್.ಎಂ.ಸಿ.ಜಿ ಕ್ಲಸ್ಟರ್ಗೆ 1275 ಕೋಟಿ ಬಂಡವಾಳ: 9100 ಉದ್ಯೋಗ ಸೃಷ್ಟಿ ಒಡಂಬಡಿಕೆಗೆ ಸಹಿ
ಎಫ್.ಎಂ.ಸಿ.ಜಿ ಕ್ಲಸ್ಟರ್ ಹುಬ್ಬಳ್ಳಿ ಹಾಗೂ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ 16 ಬಂಡವಾಳ ಹೂಡಿಕೆದಾರರರು ಒಡಂಬಡಿಕೆಗೆ ಸಹಿ ಹಾಕಲಾಯಿತು. ಧಾರವಾಡದ ಮುಮ್ಮಿಗಟ್ಟಿಯಲ್ಲಿ ಎಫ್ಎಂಸಿಜಿ ಕ್ಲಸ್ಟರ್ ಸ್ಥಾಪನೆ ಪ್ರಕ್ರಿಯೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದ ಬೆನ್ನಲ್ಲೇ 16 ಬಂಡವಾಳ ಹೂಡಿಕೆದಾರರು 1275 ಕೋಟಿ ಬಂಡವಾಳ ಹೂಡಿಕೆ ಮೂಲಕ 9100 ಉದ್ಯೋಗ ಸೃಷ್ಟಿಗೆ ಈ ಸಮಾವೇಶದ ಮೂಲಕ ಅಡಿಪಾಯ ಹಾಕಲಾಯಿತು.
ಇನ್ನೂ ಜ್ಯೋತಿ ಲ್ಯಾಬ್ ಲಿಮಿಟೆಡ್, ನಟೂರ್ ಫುಡ್ ಆ್ಯಂಡ್ ಪ್ರೊಡೆಕ್ಟ್ ಲಿಮಿಟೆಡ್, ಅಲ್ಪಲಾ ಇಂಡಿಯಾ ಪ್ರೈವೆಟ್ ಲಿಮಿಟೆಡ್, ಯುಪ್ಲೇಕ್ಸ್ ಲಿಮಿಟೆಡ್, ರಿವಿನಾ ಫುಡ್, ಗೋಡಾವತ್ ಫುಡ್ ಪ್ರೈವೆಟ್ ಲಿಮಿಟೆಡ್ ಸೇರಿದಂತೆ ಸುಮಾರು 1275 ಕೋಟಿ ಒಡಂಬಡಿಕೆಗೆ ಸಹಿ ಹಾಕುವ ಮೂಲಕ 9100 ಉದ್ಯೋಗ ಸೃಷ್ಟಿ ಭರವಸೆ ನೀಡಿದರು.
ಇನ್ನೂ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವರಾದ ಎಂಟಿಬಿ ನಾಗರಾಜ, ಮುರಗೇಶ ನಿರಾಣಿ, ಹಾಲಪ್ಪ ಆಚಾರ, ಶಂಕರಪಾಟೀಲ ಮುನೇನಕೊಪ್ಪ ಸೇರಿದಂತೆ ಇತರರು ಹಾಜರಿದ್ದರು.